ಬೆಂಗಳೂರು : ಶಂಕಿತ ಉಗ್ರರ (Suspected Terrorist Arrest in Bengaluru) ಪಾತಕಿ ಕೃತ್ಯಗಳ ಭಯಾನಕ ಪ್ಲಾನ್‍ಗಳು ಬಗೆದಷ್ಟೂ ಹೊರಗೆ ಬರುತ್ತಿವೆ.
ಶಂಕಿತರ ಟಾರ್ಗೆಟ್ ಬೆಂಗಳೂರು ಮಾತ್ರ ಅಲ್ಲ, ಇಡೀ ರಾಜ್ಯದಲ್ಲಿಯೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕೋಮುಗಲಭೆ ಸೃಷ್ಟಿಸಿ ನರಮೇಧಕ್ಕೆ ಷಡ್ಯಂತ್ರ ರೂಪಿಸಿರುವುದು ಕೇಂದ್ರ ಅಪರಾಧ ವಿಭಾಗದ ಪೊಲೀಸರು (CCB Police) ತನಿಖೆ ನಡೆಸಿದ ಸಂದರ್ಭದಲ್ಲಿ ಹೊರ ಬಂದಿರುವುದಾಗಿ ತಿಳಿದು ಬಂದಿದೆ.
ಶಂಕಿತ ಉಗ್ರರು ರಾಜ್ಯಾದ್ಯಂತ ರಕ್ತಪಾತ, ನರಮೇಧ, ಪೈಶಾಚಿಕ ಕೃತ್ಯಕ್ಕೆ ಪಿತೂರಿ ಮಾಡಿದ್ದರು. ಕರಾವಳಿ, ಮಧ್ಯ ಕರ್ನಾಟಕದ ಮೇಲೆ ಶಂಕಿತ ಉಗ್ರರ ವಕ್ರದೃಷ್ಟಿ ಬಿದ್ದಿದೆ. ಕೋಮುಗಲಭೆ ನಡೆಯೋ ಸ್ಥಳಗಳನ್ನೇ ಶಂಕಿತರು ಹೆಚ್ಚು ಟಾರ್ಗೆಟ್ ಮಾಡಿದ್ದರು. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಉಡುಪಿ, ಕಲಬುರಗಿ ಹಾಗೂ ಹುಬ್ಬಳಿಯಂತಹ ನಗರದಲ್ಲಿ ಟಾರ್ಗೆಟ್ ಮಾಡಿದ್ದರು. ಈ ಹಿಂದೆ ಎಲ್ಲೆಲ್ಲಿ ಕೋಮುಗಲಭೆ ನಡೆದಿದೆ ಎಂಬ ಮಾಹಿತಿ ಸಂಗ್ರಹಿಸುತ್ತಿದ್ದರು. ಜಾಗಗಳಲ್ಲಿ ಮತ್ತೆ ಗಲಭೆ ರೀತಿ ಸೀನ್ ರೀಕ್ರಿಯೇಟ್‍ಗೆ ಸಂಚು ರೂಪಿಸಿದ್ದರು. ಈ ಮೂಲಕ ಗಲಭೆ ಮಾಡಿ ಪ್ಲಾನ್ ಎಕ್ಸಿಕ್ಯೂಟ್ ಮಾಡಲು ಚಿಂತನೆ ನಡೆಸಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಸ್ಫೋಟಕ ಅಂಶಗಳು ಒಂದೊಂದಾಗಿಯೇ ಬಯಲಾಗುತ್ತಿದ್ದು, ಉಗ್ರಜಾಲ ಇನ್ನೂ ದೊಡ್ಡದಿರುವ ಅನುಮಾನ ಎದ್ದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 50ಕ್ಕೂ ಹೆಚ್ಚು ಜನರನ್ನು ತನಿಖೆಗೆ ಒಳಪಡಿಸಲಾಗಿದೆ.