ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿನ ಮೂರು ಪ್ರಮುಖ ಪಕ್ಷಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷವಂತೂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ರೀತಿಯಲ್ಲಿಯೇ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ತಂತ್ರ ರೂಪಿಸುತ್ತಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರದ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸಕ್ಕೆ ಚಾಲನೆ ಸಿಕ್ಕಿದೆ.
ವಿಧಾನಸಭೆ ಚುನಾವಣೆಯ ನಂತರ ಮತ ಬದಲಾವಣೆ, ಜನರ ಮನಸ್ಥಿತಿ, ಜನ ಪ್ರತಿನಿಧಿಗಳ ಬಲ, ಟಿಕೆಟ್ ಆಕಾಂಕ್ಷಿಗಳು, ಪ್ರತಿಪಕ್ಷಗಳ ಬಲಾಬಲ, ಚುನಾವಣೆಯಲ್ಲಿ ಸ್ಥಳೀಯವಾಗಿ ಪರಿಣಾಮ ಬೀರುವ ಸಂಗತಿ, ಹಾಲಿ ಸಂಸದರ ಕುರಿತು ಇರುವ ಅಭಿಪ್ರಾಯ ಸೇರಿದಂತೆ ವಿವಿಧ ಮಾಹಿತಿಯನ್ನು ಎಐಸಿಸಿ ಕೇಳಿದೆ.
ಪಕ್ಷದ ಕೆಲವರಿಗೆ ವಸ್ತುನಿಷ್ಠ ವರದಿ ಕೊಡುವಂತೆ ದೆಹಲಿಯಿಂದ ಸೂಚನೆ ನೀಡಲಾಗಿದೆ. ಜಿಲ್ಲಾವಾರು ಆಯ್ದ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. 28 ಲೋಕಸಭಾ ಕ್ಷೇತ್ರದ ಪೈಕಿ 20 ಸ್ಥಾನವನ್ನಾದರೂ ಗೆಲ್ಲಬೇಕು ಮತ್ತು ಆ ಮೂಲಕ ಬಿಜೆಪಿ ಬಲ ಕುಗ್ಗಿಸಬೇಕೆಂದು ಕಾಂಗ್ರೆಸ್ ಕರ್ನಾಟಕದತ್ತ ವಿಶೇಷ ಗಮನ ನೀಡಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿತ್ತು. ಹಾಸನ ಹಾಗೂ ಬೆಂಗಳೂರು ಗ್ರಾಮಾಂತ ಲೋಕಸಭಾ ಕ್ಷೇತ್ರವನ್ನು ಹೊರತುಪಡಿಸಿ ಗೆಲುವು ಪಡೆದುಕೊಂಡಿತ್ತು. ಮಂಡ್ಯದಲ್ಲಿ ಪರೋಕ್ಷವಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಲಾಗಿತ್ತು. 2019ರಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದ ಹಾಸನದ ಮೇಲೆಯೂ ಕಾಂಗ್ರೆಸ್ ವಿಶೇಷ ಗಮನ ಹರಿಸಿದೆ.
ಪಕ್ಷದ ಸಂಘಟನೆಯನ್ನು ಸಕ್ರಿಯವಾಗಿಡುವ ಕೆಲಸ ಕೂಡ ಸದ್ದಿಲ್ಲದೇ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸುವುದು, ರಾಜ್ಯ ಸರ್ಕಾರದ ಯೋಜನೆಯನ್ನು ಮನೆ ಮನೆಗೆ ಮುಟ್ಟಿಸಲು ಪ್ರಚಾರ ನಡೆಸುವುದು, ಬೂತ್ ಸಂಘಟನೆ ಸೇರಿದಂತೆ ಗೆಲ್ಲುವ ತಂತ್ರ ರೂಪಿಸಲು ಕಾಂಗ್ರೆಸ್ ಮುಂದಾಗಿದೆ.