ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ದಿನವೊಂದಕ್ಕೆ ಒಂದು ಕೇಂದ್ರದಿಂದ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸುವಂತೆ ಸುತ್ತೋಲೆ ಹೊರಡಿಸಿದ್ದ ಸರ್ಕಾರದ ನಿರ್ಧಾರದಿಂದ ‘ಗೃಹಲಕ್ಷ್ಮಿಯರು’ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
60 ಅರ್ಜಿ ಸ್ವೀಕರಿಸುವ ಕೇಂದ್ರದಲ್ಲಿ 200-300 ಮಹಿಳೆಯರು ನೋಂದಣಿಗೆ ತೆರಳಿರುವುದರಿಂದ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಈ ಸಮಸ್ಯೆ ಉಂಟಾಗಿದ್ದರಿಂದ ಒಂದು ದಿನದ ನಂತರ ಸರ್ಕಾರ ನಿಯಮ ಬದಲಾಯಿಸಿದ್ದು, ದಿನದ ನೋಂದಣಿ ಮಿತಿ ಘೋಷಿಸಿದೆ. ಮೊಬೈಲ್ ಗೆ ನೋಂದಣಿ ವೇಳಾಪಟ್ಟಿಯ ಸಂದೇಶ ಬಾರದಿದ್ದವರು ಸರ್ಕಾರ ನೀಡಿರುವ 1902 ಅಥವಾ 8147500500 ನಂಬರ್ಗೆ ಪಡಿತರ ಕಾರ್ಡ್ ಸಂಖ್ಯೆಯನ್ನು ಎಸ್ಎಂಎಸ್ ಮಾಡಿ ತಾವು ನೋಂದಾಯಿಸುವ ಸ್ಥಳ, ಸಮಯವನ್ನು ತಿಳಿದುಕೊಳ್ಳಬಹುದು.
ಎಸ್ಎಂಎಸ್ ಮಾಡಿದ ಕೆಲವರಿಗೆ 2024ರ ಜನವರಿ ಮತ್ತು ಫೆಬ್ರವರಿಗೆ ಬಂದು ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಿ ಎಂದು ಎಸ್ಎಂಎಸ್ ಬರುತ್ತಿವೆ. ಒಂದು ವೇಳೆ 2024ರಲ್ಲಿ ನೋಂದಣಿ ಮಾಡಿಸಿಕೊಳ್ಳುವಂತಾದರೆ ಕನಿಷ್ಠ ಐದಾರು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ. ಹೀಗಾಗಿ ಇದನ್ನು ಸರಿಪಡಿಸಬೇಕೆಂದು ಮಹಿಳೆಯರು ಮನವಿ ಮಾಡುತ್ತಿದ್ದಾರೆ.