ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಲಿರುವ ಮಹಾರಾಜ ಟ್ರೋಫಿ ಟಿ20 ಫ್ರ್ಯಾಂಚೈಸಿ ಲೀಗ್ ಟೂರ್ನಿಯಲ್ಲಿ ಆಡಲು ಆಟಗಾರರ ಹರಾಜು ಪ್ರಕ್ರಿಯೆ ಇಂದು ನಡೆಯಲಿದೆ.
ಸುಮಾರು 700 ಆಟಗಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಆಟಗಾರರಾದ ಮಯಂಕ್ ಅಗರವಾಲ್, ಮನೀಷ್ ಪಾಂಡೆ, ದೇವದತ್ತ ಪಡಿಕ್ಕಲ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆ.ಸಿ. ಕಾರ್ಯಪ್ಪ, ಅಭಿಮನ್ಯು ಮಿಷುತನ್, ಪ್ರವೀಣ್ ದುಬೆ, ರೋನಿತ್, ಶ್ರೇಯಸ್, ಜೆ.ಸುಚಿತ್, ಕೆ.ಪಿ. ಅಪ್ಪಣ್ಣ, ವೈಶಾಕ ವಿಜಯಕುಮಾರ್ ಕೂಡ ಈ ಪಟ್ಟಿಯಲ್ಲಿದ್ದಾರೆ.
ಮಹಾರಾಜ ಟೂರ್ನಿಯು ಆಗಷ್ಟ್ 13ರಿಂದ ಆರಂಭವಾಗಲಿದೆ. ಕಳೆದ ವರ್ಷದ ಚಾಂಪಿಯನ್ ಕುಲಬುರಗಿಯ ಮಿಸ್ಟಿಕ್ಸ್, ರನ್ನರ್ಸ್ ಆಪ್ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರು ವಾರಿಯರ್ಸ್ ಮತ್ತು ಹುಬ್ಬಳ್ಳಿ ಟೈಗಗರ್ಸ್ ತಂಡಗಳು ಆಟಗಾರರನ್ನು ಖರೀದಿಸಲಿವೆ. ಈ ಬಾರಿ ಎರಡು ಹೊಸ ಫ್ರಾಂಚೈಸಿಗಳಾದ ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ಕೂಡ ಕಣದಲ್ಲಿವೆ.
ನಾಲ್ಕು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ ಹಾಗೂ ಐಪಿಎಲ್ ನಲ್ಲಿ ಆಡಿರುವ ಆಟಗಾರರು ಇದ್ದಾರೆ. ಬಿ ಗುಂಪಿನಲ್ಲಿ ಬಿಸಿಸಿಐ ಆಯೋಜಿತ ರಾಜ್ಯ ಟೂರ್ನಿಗಳಾದ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಮತ್ತು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿದವರು ಇದ್ದಾರೆ. ಸಿ ಗುಂಪಿನಲ್ಲಿ ಬಿಸಿಸಿಐನ ಇನ್ನಿತರ ಟೂರ್ನಿಗಳಲ್ಲಿ ಆಡಿದ ಆಟಗಾರರು ಹಾಗೂ ಡಿ ಗುಂಪಿನಲ್ಲಿ ಕೆಎಸ್ಸಿನಲ್ಲಿ ನೊಂದಾಯಿತರು ಇದ್ದಾರೆ. ಪ್ರತಿ ತಂಡವು ಕನಿಷ್ಠ 16 ಹಾಗೂ ಗರಿಷ್ಠ 18 ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು.
ಕಳೆದ ವರ್ಷ ಮಹಾರಾಜ ಟ್ರೋಫಿ ಟೂರ್ನಿಯನ್ನು ಆರಂಭಿಸಲಾಗಿತ್ತು. ಆಗ ಡ್ರಾಫ್ಟ್ ಮಾದರಿಯಲ್ಲಿ ತಂಡಗಳೂ ಹಾಗೂ ಆಟಗಾರರ ಆಯ್ಕೆ ನಡೆದಿತ್ತು. ಈ ಬಾರಿ ಹರಾಜು ನಡೆಸಲಾಗುತ್ತಿದೆ.