ದೇಶದ ಅತಿದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (Byju’s) ಹಲವಾರು ಸಂಕಷ್ಟಗಳಿಗೆ ಸಿಲುಕಿ ಬೆಂಗಳೂರಿನಲ್ಲಿನ ತನ್ನ ಬೃಹತ್ ಕಚೇರಿಯನ್ನು ಖಾಲಿ ಮಾಡುತ್ತಿದೆ ಎನ್ನಲಾಗಿದೆ.
ಸಾವಿರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಬೈಜುಸ್, ಕಲ್ಯಾಣಿ ಟೆಕ್ ಪಾರ್ಕ್ನಲ್ಲಿರುವ 5.58 ಲಕ್ಷ ಚದರ ಅಡಿಯ ಕಚೇರಿ ಸ್ಥಳವನ್ನು ತೆರವುಗೊಳಿಸುತ್ತಿದೆ ಎಂದು ತಿಳಿದು ಬಂದಿದೆ.
ಬೈಜುಸ್ ಸಂಸ್ಥೆ ಬೆಂಗಳೂರು ಮೂಲದ್ದಾಗಿದ್ದು ಇಲ್ಲಿ 3 ಕಚೇರಿಗಳನ್ನು ಹೊಂದಿದೆ. ಬ್ರೂಕ್ಫೀಲ್ಡ್ ಪ್ರದೇಶದಲ್ಲಿನ ಕಲ್ಯಾಣಿ ಟೆಕ್ ಪಾರ್ಕ್ನಲ್ಲಿನ ಅದರ ಕಚೇರಿ ಅತಿದೊಡ್ಡದು. ಬನ್ನೇರುಘಟ್ಟ ರಸ್ತೆಯಲ್ಲಿನ ಪ್ರೆಸ್ಟೀಜ್ ಟೆಕ್ ಪಾರ್ಕ್ನಲ್ಲಿನ ಒಂದು ಸೇರಿದಂತೆ ಬೈಜುಸ್ನ ಇನ್ನೆರಡು ಕಚೇರಿಗಳನ್ನು ಹೊಂದಿದೆ. ಟೆಕ್ ಪಾರ್ಕ್ನಲ್ಲಿ ಬೈಜುಸ್ ಒಟ್ಟು 9 ಮಹಡಿಗಳನ್ನು ಹೊಂದಿದ್ದು ಅದರಲ್ಲಿ 2 ಮಹಡಿಗಳ ಕಚೇರಿ ಸ್ಥಳವನ್ನು ತೆರವುಗೊಳಿಸಿದೆ.
ಕಲ್ಯಾಣಿ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ (ವರ್ಕ್ ಫ್ರಂ ಹೋಮ್) ಅವಕಾಶ ಕೊಡಲಾಗಿದೆ. ಇಲ್ಲವಾದರೆ ಬೆಂಗಳೂರಿನಲ್ಲಿನ ಅದರ ಇನ್ನೆರಡು ಕಚೇರಿಗಳಿಗೆ ಹೋಗಿ ಕೆಲಸ ಮಾಡುವ ಅವಕಾಶವನ್ನು ಉದ್ಯೋಗಿಗಳಿಗೆ ನೀಡಲಾಗಿರುವುದು ತಿಳಿದುಬಂದಿದೆ.