ಬೆಂಗಳೂರಿನಲ್ಲಿ ಮೆಟ್ರೋ ರೈಲು ಆಗಸ್ಟ್ ತಿಂಗಳಿಂದ ಇನ್ನೂ ಎರಡು ಹೊಸ ಮಾರ್ಗದಲ್ಲಿ ಸಂಚಾರಿಸಲಿದೆ. ಇದರಿಂದಾಗಿ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಪ್ರಯಾಣಿಕರಿಗೆ ಸಹಾಯವಾಗಲಿದೆ.
ಬೈಯಪ್ಪನಹಳ್ಳಿ- ಕೆ.ಆರ್.ಪುರ ಹಾಗೂ ಕೆಂಗೇರಿ- ಚಲ್ಲಘಟ್ಟದ ನಡುವೆ ಮುಂದಿನ ತಿಂಗಳು ಮೆಟ್ರೋ ಸೇವೆ ಆರಂಭವಾಗಲಿದೆ. ಆಗಸ್ಟ್ ಕೊನೆ ವಾರದಲ್ಲಿ ನೇರಳೆ ಮಾರ್ಗದ ವಿಸ್ತರಿತವಾದ ಬೈಯಪ್ಪನಹಳ್ಳಿ- ಕೆ.ಆರ್.ಪುರ ನಡುವಿನ 2.5 ಕಿ.ಮೀ ಮಾರ್ಗದಲ್ಲಿ ಹೊಸದಾಗಿ ಮೆಟ್ರೋ ರೈಲು ಉದ್ಘಾಟನೆಯಾಗಲಿದೆ. ಕೆಂಗೇರಿ – ಚಲ್ಲಘಟ್ಟ ನಡುವಿನ 1.9 ಮೆಟ್ರೋ ಮಾರ್ಗವೂ ಕೂಡ ವಾಣಿಜ್ಯ ಸೇವೆಗೆ ಮುಕ್ತವಾಗಲಿದೆ ಎನ್ನಲಾಗಿದೆ.
ಈಗಾಗಲೇ ಬೈಯಪ್ಪನಹಳ್ಳಿ – ಕೆ.ಆರ್.ಪುರ ಮಾರ್ಗದಲ್ಲಿ ಕೊನೆಯ ಹಂತದ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ನೇರಳೆ ಮಾರ್ಗಗಳಾದ ಬೈಯಪ್ಪನಹಳ್ಳಿ- ಎಸ್.ವಿ ರಸ್ತೆ ಹಾಗೂ ಕೃಷ್ಣರಾಜಪುರ- ವೈಟ್ ಫೀಲ್ಡ್ ನಿಲ್ದಾಣಗಳ ನಡುವೆ ಬೆಳಿಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ.
ಮಿಸ್ಸಿಂಗ್ ಲಿಂಕ್’ ಎನ್ನಿಸಿಕೊಂಡಿರುವ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಜೊತೆಗೆ ಕೆಂಗೇರಿ-ಚಲ್ಲಘಟ್ಟ ನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ.
ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಎರಡನೇ ವಾರದೊಳಗೆ ಜನತೆ ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ 2.1 ಕಿ.ಮೀ. ಹಾಗೂ ಕೆಂಗೇರಿ-ಚಲ್ಲಘಟ್ಟನಡುವಿನ 1.9 ಕಿ.ಮೀ. ಮೆಟ್ರೋ ಕಾಮಗಾರಿ ಬಾಕಿ ಇದೆ. ಇದು ಪೂರ್ಣಗೊಂಡಲ್ಲಿ ನೇರಳೆ ಮಾರ್ಗದ 43.5 ಕಿ.ಮೀ. ಲೈನ್ ಪೂರ್ಣವಾದಂತಾಗಲಿದೆ.