ಜೈಲಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ 40 ಅಡಿ ಬೃಹತ್ ಗೋಡೆ ಹಾರಿ ಪರಾರಿಯಾಗಿದ್ದ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಯೊಬ್ಬನನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.
ದಾವಣಗೆರೆ ಜೈಲಿನಿಂದ ತಪ್ಪಿಸಿಕೊಳ್ಳಲು 40 ಅಡಿ ಗಡಿ ಗೋಡೆ ಹಾರಿ ಆತ ಪರಾರಿಯಾಗಿದ್ದ. ಈ ದೃಶ್ಯ ಉಪ ಕಾರಾಗೃಹದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅತ್ಯಾಚಾರದ ಆರೋಪವನ್ನು ಎದುರಿಸುತ್ತಿರುವ 23 ವರ್ಷದ ಕೈದಿ ವಸಂತ್ ಎಂಬಾತನೇ ಪರಾರಿಯಾಗಿದ್ದ.
ಗೋಡೆ ಜಿಗಿದಾಗ ಆರೋಪಿಯ ಕಾಲಿಗೆ ಪೆಟ್ಟುಬಿದ್ದರೂ, ಅಲ್ಲಿಂದ ಆತ ಪರಾರಿಯಾಗಿದ್ದ. ನಂತರ ದುಗ್ಗಾವತಿಯ ಸಂಬಂಧಿಕರ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಆದರೆ, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಗುರುಬಸವರಾಜ್ ಹೇಳಿದ್ದಾರೆ.
ಕರೂರ ಪ್ರದೇಶದ ನಿವಾಸಿ ವಸಂತ ಶನಿವಾರ ಜೈಲಿನಿಂದ ಪರಾರಿಯಾಗಿದ್ದ. ಬಸವನಗರ ಠಾಣೆಯ ಇನ್‌ಸ್ಪೆಕ್ಟರ್ ಗುರುಬಸವರಾಜ್ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡ ರಚಿಸಲಾಗಿತ್ತು. ಪೇದೆ ನಿಜಲಿಂಗಪ್ಪ ನೀಡಿದ ಖಚಿತ ಮಾಹಿತಿ ಆಧರಿಸಿ ಸಬ್ ಇನ್‌ಸ್ಪೆಕ್ಟರ್ ನಾಗರಾಜ ಮತ್ತು ಸಿಬ್ಬಂದಿಯು ಹರಿಹರ ತಾಲ್ಲೂಕಿನ ದುಗ್ಗಾವತಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.