ರೈಲಿನಡಿ ನುಗ್ಗಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲಿನಲ್ಲಿ ಸಿಲುಕಿದ ಮಹಿಳೆಯೊಬ್ಬರು ಕೊನೆಗೆ ಪ್ರಾಣ ಉಳಿಸಿಕೊಂಡ ಘಟನೆಯೊಂದು ನಡೆದಿದೆ.
ಹಳಿ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ಘಟನೆ ರಾಜಾನುಕುಂಟೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೊ ವೈರಲ್ ಆಗಿದೆ. ಈ ಭಾಗದ ಪಾರ್ವತಿಪುರ, ಅದ್ದಿಗಾನಹಳ್ಳಿ, ತರಹುಣಸೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರು, ಕಾರ್ಮಿಕರು, ವಿದ್ಯಾರ್ಥಿಗಳು ರಾಜಾನುಕುಂಟೆ ತಲುಪಲು ರೈಲು ಹಳಿ ದಾಟಿ ಸಾಗಬೇಕಿದೆ. ರೈಲ್ವೆ ಕ್ರಾಸಿಂಗ್ ಸಮಯದಲ್ಲಿ ಗೂಡ್ಸ್ ರೈಲುಗಳು ನಿಂತಿರುತ್ತವೆ. ಹೀಗಾಗಿ ರೈಲಿನಡಿ ನುಗ್ಗಿ ದಾಟುತ್ತಾರೆ.
ಹೀಗೆ ಅದ್ದಿಗಾನಹಳ್ಳಿ ನಿವಾಸಿ ಮಹಿಳೆಯೊಬ್ಬರು ರಾಜಾನುಕುಂಟೆಯತ್ತ ತೆರಳಲು ನುಗ್ಗಿದ್ದಾರೆ. ಆಗ ರೈಲು ಚಲಿಸಲು ಆರಂಭಿಸಿದೆ. ಕೂಡಲೇ ಇದನ್ನು ಅರಿತ ಮಹಿಳೆ ಹಳಿಯ ಮಧ್ಯೆಯೇ ಬೋರಲಾಗಿ ಮಲಗಿರೈಲು ಹೋದ ನಂತರ ಎದ್ದು ಬಂದಿದ್ದಾರೆ. ಸಂಪೂರ್ಣ ದೃಶ್ಯಾವಳಿಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಸಮಸ್ಯೆಗೆ ಪರಿಹಾರ ಹುಡುಕಿಕೊಡಿ. ಇಲ್ಲವಾದರೆ, ಈ ಭಾಗದ ಜನರು ಪ್ರಾಣ ಒತ್ತೆ ಇಟ್ಟು ಸಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.