ಭಾರತ(India) ಹಾಗೂ ಕೆನಡಾ(Canada) ಮಧ್ಯೆದ ಸಂಬಂಧ ಮತ್ತಷ್ಟು ಉದ್ವಿಗ್ನತೆಗೆ ತಿರುಗುತ್ತಿದೆ.
ಈ ಮಧ್ಯೆ ಭಾರತವು ಕೆನಡಾದ ಪ್ರಜೆಗಳಿಗೆ ವೀಸಾ(Visa) ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್(Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪವು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೆನಡಾವು ಭಾರತೀಯ ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡಿದ ನಂತರ, ಭಾರತವು ಕೂಡ ಅದೇ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಆದಷ್ಟು ಬೇಗ ದೇಶ ಬಿಡುವಂತೆ ಹೇಳಿದೆ. ಹೀಗಾಗಿ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ BLS ಇಂಟರ್ನ್ಯಾಶನಲ್ ತನ್ನ ಕೆನಡಾದ ವೆಬ್ಸೈಟ್ನಲ್ಲಿ ಈ ನಿಟ್ಟಿನಲ್ಲಿ ಸಂದೇಶ ಪೋಸ್ಟ್ ಮಾಡಿದ್ದರೂ ವೀಸಾ ಸೇವೆಗಳನ್ನು ಅಮಾನತುಗೊಳಿಸುವ ಬಗ್ಗೆ ಯಾವುದೇ ಔಪಚಾರಿಕ ಪ್ರಕಟಣೆ ಮಾಡಲಾಗಿಲ್ಲ.