ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಳೆದ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ 5 ಮತ್ತು 8ನೇ ತರಗತಿ ಮಕ್ಕಳಿಗೆ ನಡೆಸಿದ ಮೌಲ್ಯಾಂಕನ ವಿಶ್ಲೇಷಣಾತ್ಮಕ ವರದಿ ಬಿಡುಗಡೆ ಮಾಡಿದೆ.
ಇದರಲ್ಲಿ 8ನೇ ತರಗತಿಗಿಂತ 5ನೇ ಕ್ಲಾಸ್ ಮಕ್ಕಳೇ ಮುಂದಿದ್ದಾರೆ. ಗ್ರಾಮೀಣರು ಮತ್ತು ಬಾಲಕಿಯರು ಮೇಲುಗೈ ಸಾಧಿಸಿದ್ದು, 5ನೇ ತರಗತಿಯಲ್ಲಿ ಸರ್ಕಾರಿ ಶಾಲೆ ಹಾಗೂ 8ನೇ ತರಗತಿಯಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳು ಮುಂದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸಕ್ತ ಸಾಲಿನ ರಾಜ್ಯ ಪಠ್ಯ ಕ್ರಮದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಯ 5ನೇ ತರಗತಿಯ 9,59,734 ಮತ್ತು 8ನೇ ತರಗತಿಯ 9,43,919 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 5ನೇ ತರಗತಿಯ 80,945 ಹಾಗೂ 8ನೇ ತರಗತಿಯ 82,388 ವಿದ್ಯಾರ್ಥಿಗಳ ಫಲಿತಾಂಶ ವಿಶ್ಲೇಷಣೆ ನಡೆಸಲಾಗಿದೆ.
ಈ ಪೈಕಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆಯು ಕ್ರಮವಾಗಿ ಶೇ.71 ಮತ್ತು ಶೇ.51 ಇತ್ತು. 5ನೇ ತರಗತಿಯ ಮೌಲ್ಯಾಂಕನದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಾಸ ಕಂಡುಬಂದಿಲ್ಲ. ಎರಡೂ ತರಗತಿಯಲ್ಲಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಾಧನೆ ಉತ್ತಮವಾಗಿದೆ. ಶೇ.80 ಗ್ರಾಮೀಣ ಮತ್ತು ಶೇ.76 ನಗರ ಪ್ರದೇಶದ ಮಕ್ಕಳು ಸಾಧನೆ ಮಾಡಿದ್ದಾರೆ.