ಇತ್ತೀಚೆಗೆ ಹಲವರು ಕೃಷಿಯೊಂದಿಗೆ ಪಶುಪಾಲನೆಗೂ ಒತ್ತು ನೀಡುತ್ತಿದ್ದಾರೆ. ಈ ಮೂಲಕ ಆದಾಯ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಹೀಗೆ ಯುವತಿಯೊಬ್ಬರು ಹೈನುಗಾರಿಕೆಯಿಂದ ಶ್ರೀಮಂತರಾಗಿದ್ದಾರೆ.
ಮಾರ್ಷಲ್ ಆರ್ಟ್ಸ್ ನಲ್ಲಿ ಬ್ಲಾಕ್ ಬೆಲ್ಟ್ ಹೊಂದಿರುವ ರಾಜಸ್ಥಾನದ ಕೋಟದ ಹುಡುಗಿ ಕೂಡ ಲಕ್ಷ ಲಕ್ಷ ಸಂಪಾದಿಸಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇವರು 12ನೇ ವಯಸ್ಸಿನಿಂದಲೇ ಪಶುಪಾಲನೆ ಹೈನುಗಾರಿಕೆ ಮಾಡುತ್ತಿದ್ದಾರೆ. ಕೋಟಾದ ಮೀತು ಗುರ್ಜರ್ ಎಂಬ ಯುವತಿಯೇ ಈ ಸಾಧಕಿ. ಪಶುಪಾಲನೆ ಮೂಲಕ ಒಬ್ಬ ಸಾಫ್ಟ್ವೇರ್ ಉದ್ಯೋಗಿಗಿಂತ ಹೆಚ್ಚಿನ ಸಂಪಾದನೆ ಮಾಡಬಹುದು ಎಂಬುವುದನ್ನು ಅವರು ತೋರಿಸಿ ಕೊಟ್ಟಿದ್ದಾರೆ.
12 ನೇ ವಯಸ್ಸಿನಲ್ಲಿ ತನ್ನ ಅಕ್ಕನಿಗೆ ಮದುವೆಯಾಯಿತು ಹಾಗೂ ಸಹೋದರ ಚಿಕ್ಕವನಾಗಿದ್ದ. ಹೀಗಾಗಿ ಅವರ ತಂದೆ ಒಬ್ಬರೇ ಹೈನುಗಾರಿಕೆ ಮಾಡುತ್ತಿದ್ದರು. ಅಂದಿನಿಂದ, ಅವಳು ತನ್ನ ತಂದೆಗೆ ಸಹಾಯ ಮಾಡಲು ಪ್ರಾರಂಭಿಸಿದ್ದರು ಮತ್ತು ಕ್ರಮೇಣ ಎಲ್ಲಾ ಕೆಲಸಗಳನ್ನು ಕಲಿತು ಪಶುಸಂಗೋಪನೆ ಮತ್ತು ಹೈನುಗಾರಿಕೆಯಲ್ಲೇ ಮುಂದುವರಿಯುತ್ತಿದ್ದಾರೆ.
ಹಸು, ಎಮ್ಮೆಗಳನ್ನು ಸಾಕುವುದು, ಕಾಲಕಾಲಕ್ಕೆ ಪ್ರಾಣಿಗಳಿಗೆ ಮೇವು ಕೊಡುವುದು, ಹಾಲು ಕರೆಯುವುದು ಸದ್ಯ ಈ ಯುವತಿಯ ಕಾಯಕವಾಗಿದೆ. ಈ ಯುವತಿಯೊಂದಿಗೆ ಸದ್ಯ ಸಹೋದರ ಕೂಡ ಕೈ ಜೋಡಿಸಿದ್ದಾನೆ. ಅವರ ಬಳಿ 4 ಎಮ್ಮೆಗಳು ಮತ್ತು 15 ಹಸುಗಳನ್ನು ಇದ್ದು, ಪ್ರತಿದಿನ 150 ಲೀಟರ್ ಹಾಲು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಇವರು ಪ್ರತಿ ತಿಂಗಳು 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ. ಗಳವರೆಗೆ ಲಾಭ ಪಡೆಯುತ್ತಿದ್ದಾರೆ.