ಪೊಲೀಸರ ವಶದಲ್ಲಿದ್ದ ವ್ಯಕ್ತಿ ತಪ್ಪಿಸಿಕೊಳ್ಳುವುದಕ್ಕಾಗಿ 2ನೇ ಮಹಡಿಯಿಂದ ಜಿಗಿದು ಕೈ, ಕಾಲು ಮುರಿದುಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಕಲಬುರಗಿ ಪಟ್ಟಣದಲ್ಲಿ ನಡೆದಿದೆ. ಅಫಜಲಪುರ (Afzalpur) ತಾಲೂಕಿನ ಮಾಶಾಳ ಗ್ರಾಮದ ಬಿಜೆಪಿ ನಾಯಕ ಮಹಾಂತೇಶ್ ಪರಾರಿಯಾಗಲು ಯತ್ನಿಸಿದ್ದಾನೆ. ಈತ ಹೊಟೇಲ್ ನಲ್ಲಿ ಊಟ ಮಾಡಿದ ನಂತರ ಅಡುಗೆ ಮನೆಯಿಂದ ಪರಾರಿಯಾಗುವುದಕ್ಕಾಗಿ 2ನೇ ಮಹಡಿಯಿಂದ ಬಿದ್ದು, ಗಾಯ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿದ್ಯುತ್ ಬಿಲ್ ವಿಚಾರಕ್ಕೆ ಜೆಸ್ಕಾಂ ಸಿಬ್ಬಂದಿ ಜೊತೆ ಮಹಾಂತೇಶ್ ಗಲಾಟೆ ನಡೆಸಿದ್ದ. ಜೆಸ್ಕಾಂ ಎಇಇ ಚಿದಾನಂದ ಜೊತೆ ಜಗಳ ನಡೆದ ಸಂದರ್ಭದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕಾರಣಕ್ಕೆ ಆತನ ವಿರುದ್ಧ ದೂರು ದಾಖಲಾಗಿತ್ತು. 1 ತಿಂಗಳ ವಿದ್ಯುತ್ ಬಿಲ್ 8 ಸಾವಿರ ರೂ. ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಾದ ಹಿನ್ನೆಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು
ಆ ನಂತರ ಮಹಾಂತೇಶ್ನನ್ನು ಅಫಜಲಪುರ ಪೊಲೀಸರು ಬಂಧಿಸಿ, ಕಲಬುರಗಿಗೆ ಕರೆ ತಂದ ಸಂದರ್ಭದಲ್ಲಿ ಊಟಕ್ಕೆಂದು ಹೊಟೇಲ್ ಗೆ ಕರೆದೊಯ್ದಾಗ ತಪ್ಪಿಸಿಕೊಳ್ಳಲು ಹೋಗಿ ಕೈ ಕಾಲು ಮುರಿದುಕೊಂಡಿದ್ದಾನೆ ಎನ್ನಲಾಗಿದೆ.