ಭಾರತ ಹಾಗೂ ಕೆನಡಾ (India And Canada) ರಾಷ್ಟ್ರಗಳ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ (Justin Trudeau) ಈಗ ಭಾರತದ ಪರ ಮೃದುವಾಗಿ ಮಾತನಾಡಲು ಆರಂಭಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾರತವು ಅಭಿವೃದ್ಧಿ ಪ್ರಧಾನ ದೇಶ. ನಾವು ಯಾವುದೇ ಕಾರಣಕ್ಕೂ ಭಾರತವನ್ನು ಪ್ರಚೋದಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹೇಳಿದ್ದಾರೆ. ಭಾರತ ಅಭಿವೃದ್ಧಿ ಪ್ರಧಾನ ದೇಶ ಎಂಬುವುದರಲ್ಲಿ ಎರಡು ಮಾತಿಲ್ಲ. ದೇಶದೊಂದಿಗೆ ನಾವು ಜೊತೆಗೂಡಿ ಪ್ರಾದೇಶಿಕ ಹಾಗೂ ಜಾಗತಿಕ ಏಳಿಗೆ ದಿಸೆಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ನಾವು ಪ್ರಚೋದನೆ ನೀಡುವ ಹಾಗೂ ಯಾವುದೇ ಸಮಸ್ಯೆ ಸೃಷ್ಟಿಸುವ ಪ್ರಯತ್ನ ಮಾಡುವುದಿಲ್ಲ. ಕೆನಡಿಯನ್ನರು (Canadians) ಹಾಗೂ ನಮ್ಮ ಮೌಲ್ಯಗಳನ್ನು ರಕ್ಷಿಸುವುದಕ್ಕಾಗಿ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ಮೆತ್ತಗಾಗಿ ಮಾತನಾಡಿದ್ದಾರೆ.
ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಕೆನಡಾದ ನಾಗರಿಕ ಎಂದು ಪರಿಗಣಿಸಿ ಜಸ್ಟಿನ್ ಟ್ರುಡೋ ಭಾರತದ ವಿರುದ್ಧ ಆರೋಪ ಮಾಡಿ, ಆತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಕೆನಡಾ ನಾಗರಿಕರ ಹಕ್ಕುಗಳನ್ನು ಹಾಗೂ ದೇಶದ ಮೌಲ್ಯಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ, ಯಾವುದೇ ಕಾರಣಕ್ಕೆ ಭಾರತಕ್ಕೆ ಪ್ರಚೋದನೆ ನೀಡುವುದಿಲ್ಲ ಎಂದು ನಯವಾಗಿ ಹೇಳುತ್ತಲೇ ಈ ಆರೋಪ ಮಾಡಿದ್ದರು.
ಕೆನಡಾದಲ್ಲಿನ ಭಾರತದ ರಾಯಭಾರಿಯನ್ನು ಉಚ್ಚಾಟನೆಗೊಳಿಸಿದ ನಂತರ ಭಾರತವೂ ಹಲವು ಕ್ರಮಗಳ ಮೂಲಕ ತಿರುಗೇಟು ನೀಡಿದೆ. ಭಾರತದಲ್ಲಿರುವ ಕೆನಡಾ ರಾಯಭಾರಿಯನ್ನ ಉಚ್ಚಾಟನೆ ಮಾಡುವ ಜೊತೆಗೆ ಕೆನಡಾ ನಾಗರಿಕರಿಗೆ ವೀಸಾ ನೀಡುವುದನ್ನೂ ಸ್ಥಗಿತಗೊಳಿಸಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮಧ್ಯಪ್ರವೇಶಿಸಿದ್ದು, ತನಿಖೆಗೆ ಭಾರತ ಸಹಕರಿಸಲಿ ಎಂದಿದೆ