ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಬೈಕ್ ಚಲಾಯಿಸಿದ ಪರಿಣಾಮ ಅಪಘಾತ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಯಶವಂತಪುರ (Yeshwantpur) ಯಾರ್ಡ್ ಬಳಿ ನಡೆದಿದೆ. ಮನಮೋಹನ್ (31) ನಿಖಿಲ್ (25) ಸಾವನ್ನಪ್ಪಿದ ದುರ್ದೈವಿಗಳು. ಈ ಘಟನೆ ಬೆಳಗಿನ ಜಾವ ಸಂಭವಿಸಿದೆ. ಅತಿವೇಗವಾಗಿ ಬಿಎಂಡಬ್ಲೂ ಬೈಕ್ (BMW Bike) ಚಾಲನೆ ಮಾಡುತ್ತಿದ್ದ ಯುವಕರು ಯಶವಂತಪುರದಿಂದ ಆರ್‌ಎಂಸಿ ಯಾರ್ಡ್ ರೋಡ್ ಕಡೆಗೆ ತೆರಳುತ್ತಿದ್ದರು.
ಮದ್ಯ ಸೇವಿಸಿ ಬೈಕ್ ಚಲಾಯಿಸುತ್ತಿದ್ದಿದ್ದಲ್ಲದೇ, ಹೆಲ್ಮೆಟ್ ಕೂಡ ಅವರು ಧರಿಸಿರಲಿಲ್ಲ. ಈ ವೇಳೆ ಬೈಕ್ ನಿಯಂತ್ರಣಕ್ಕೆ ಸಿಗದೆ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇಬ್ಬರು ಬೈಕ್ ನಿಂದ ಕೆಳಗೆ ಬಿದ್ದು ತೀವ್ರ ರಕ್ತಸ್ರಾವವಾಗಿ, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೋಹನ್ ಮತ್ತು ನಿಖಿಲ್ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ನಡೆದಿದೆ. ಇಬ್ಬರ ಮೃತದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶವಂತಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.