ಜನರಿಗೆ ಸಿದ್ದರಾಮಯ್ಯ ಸರ್ಕಾರ ಅಂದರೆ ಯಡವಟ್ಟು ಸರ್ಕಾರ ಎನಿಸುತ್ತಿದೆ. ಯಾವ ಆಧಾರದಲ್ಲಿ ಎಲೆಕ್ಷನ್ ಗೆದ್ದಿದ್ದಾರೋ ಅದಕ್ಕೆ ಉಲ್ಟಾ ಆಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರ ಬಂದು ನಾಲ್ಕೈದು ತಿಂಗಳು ಕಳೆದಿದೆ. ಅಷ್ಟರಲ್ಲಿಯೇ ಯಡವಟ್ಟು ಮಾಡಿಕೊಂಡಿದೆ. ಈ ರಾಜ್ಯ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಸ್ವಜನ ಪಕ್ಷಪಾತದ ಉತ್ತುಂಗಕ್ಕೆ ಏರಿದೆ. ಕಾವೇರಿ ನೀರಿನ ವಿಚಾರದಲ್ಲಿ ಪೂರ್ತಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್ ಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ. ಕೊಣ್ಣೊರೆಸುವ ಮೀಟಿಂಗ್ ಕರೆದು ಮೊದಲೇ ಪ್ರತಿ ದಿನ 15 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇವರ ಭಾಗ್ಯಗಳು ಅರ್ಧ ಜನರಿಗೆ ಮಾತ್ರ ಸಿಕ್ಕಿವೆ. ಸುಮ್ಮನೆ ಸರ್ವರ್ ಡೌನ್, ಫೆಲ್ಯೂರ್ ಎಂದು ನೆಪ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರ ಶಾಸಕರಿಗೂ ಈ ಸರ್ಕಾರದ ಬಗ್ಗೆ ಖುಷಿ ಇಲ್ಲ. ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಅಧಿಕಾರಿಗಳು ಕೂಡ ನಾಲ್ಕೇ ತಿಂಗಳಿಗೆ ಬೇಸತ್ತಿದ್ದಾರೆ. ಸಿಎಂ, ಡಿಸಿಎಂ, ಮಂತ್ರಿಗಳು ಕೆಲಸ ಮಾಡುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.