ರಾಯಚೂರು: ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ (DJ sound) ಸೌಂಡ್ ಗೆ ಹಸುಗೂಸೊಂದು ಬಲಿಯಾಗಿರುವ ಘಟನೆ ವರದಿಯಾಗಿದೆ.
19 ದಿನದ ಮಗು ಡಿಜೆ ಸದ್ದಿಗೆ ಸಾವನ್ನಪ್ಪಿದೆ ಎನ್ನಲಾಗಿದ್ದು, ಸೆಪ್ಟೆಂಬರ್ 27ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುರೇಶ್ ಬಾಬು, ಸುಮತಿ ದಂಪತಿಯ ಹೆಣ್ಣು ಮಗು ಮೃತಪಟ್ಟಿದ್ದು, ಅತಿಯಾದ ಡಿಜೆ ಸೌಂಡ್ನಿಂದ ಸಾವನ್ನಪ್ಪಿದೆ ಎಂದು ಪಾಲಕರು ಶಂಕಿಸಿ, ಆರೋಪಿಸಿದ್ದಾರೆ.
ಕಳೆದ 19 ದಿನಗಳ ಹಿಂದೆ ಜನಿಸಿದ್ದ ಮಗು ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಸೆ.27ರ ರಾತ್ರಿ ಮಗುವಿಗೆ ಹಾಲುಣಿಸಿ ತಾಯಿ ಸುಮತಿ ಮಲಗಿಸಿದ್ದರು. ಆದರೆ, ಡಿಜೆ ಸೌಂಡ್ನಿಂದ ಹೃದಯದ ಸಮಸ್ಯೆಯಾಗಿ ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾರೆ. ಮೃತ ಮಗುವಿನ ಅಜ್ಜ ಜಿ.ಟಿ. ರೆಡ್ಡಿ ಅವರು ವಕೀಲರಾಗಿದ್ದು ನಗರದ ಮಡ್ಡಿಪೇಟೆಯಲ್ಲಿ ವಾಸವಾಗಿದ್ದಾರೆ. ಇವರು ತಮ್ಮ ಮಗಳ ಸುಮತಿಯನ್ನ ಹೆರಿಗೆಗೆ ಕರೆತಂದಿದ್ದರು. 19 ದಿನಗಳ ಹಿಂದಷ್ಟೆ ಹೆಣ್ಣುಮಗು ಜನಿಸಿತ್ತು. ಅತಿಯಾದ ಶಬ್ಧದಿಂದಲೇ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ, ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.