ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪ್ರೀತಿಸುತ್ತಿದ್ದ ವ್ಯಕ್ತಿ ಭೇಟಿಯಾಗಲು ಬಾಂಗ್ಲಾದೇಶದ 32 ವರ್ಷದ ಮೂರು ಮಕ್ಕಳ ತಾಯಿಯು ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಗೆ ಬಂದು, ಆತನಿಗೂ ಮದುವೆಯಾಗಿದ್ದು ತಿಳಿಯುತ್ತಿದ್ದಂತೆ ಮರಳಿ ಹೋಗಿದ್ದಾರೆ.
ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವಿಧವೆ ದಿಲ್ರುಬಾ ಶರ್ಮಿ ಮೂವರು ಮಕ್ಕಳೊಂದಿಗೆ ಸೆ. 26ರಂದು ಭಾರತಕ್ಕೆ ಆಗಮಿಸಿದ್ದು, 27 ವರ್ಷದ ಅಬ್ದುಲ್ ಕರೀಂ ಅವರನ್ನು ಭೇಟಿಯಾಗಲು ಬಂದಿದ್ದಳು. ಬಹ್ರೇನ್ ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಕರೀಂ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ.
ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ದಿಲ್ರುಬಾ ಶರ್ಮಿ ಪತಿ ನಿಧನರಾಗಿದ್ದಾರೆ. ಪ್ರವಾಸಿ ವೀಸಾದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಸೆಪ್ಟೆಂಬರ್ 26 ರಂದು ಲಕ್ನೋ ತಲುಪಿದ್ದಾಳೆ. ಅವಿವಾಹಿತನೆಂದು ಶರ್ಮಿಗೆ ಕರೀಂ ನಂಬಿಸಿದ್ದ. ಆತ ಗ್ರಾಮಕ್ಕೆ ಮರಳಿದಾಗ ಆತನ ಪತ್ನಿಯನ್ನು ನೋಡಿ ಶರ್ಮಿ ಗಾಬರಿಗೊಂಡಿದ್ದಾಳೆ. ಶರ್ಮಿ ವಾಪಸ್ ಬಾಂಗ್ಲಾಗೆ ಮರಳಿದ್ದಾಳೆ. ಭದ್ರತಾ ಏಜೆನ್ಸಿಗಳು ಕೂಡ ಕ್ರಮ ಕೈಗೊಂಡು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ.