ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಶವ ಕಬ್ಬಿಣದ ಟ್ರಂಕ್ ನಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬದ ಮೂವರು ಹೆಣ್ಣು ಮಕ್ಕಳು ಇತ್ತೀಚೆಗೆ ಕಾಣೆಯಾಗಿದ್ದರು. ಆದರೆ, ಸದ್ಯ ಅವರ ಶವ ಕಬ್ಬಿಣದ ಟ್ರಕ್ ನಲ್ಲಿ ಪತ್ತೆಯಾಗಿದೆ. ಜಲಂಧರ್‌ನ ಮಕ್ಸೂದನ್‌ನಲ್ಲಿನ ಅವರ ನಿವಾಸದಲ್ಲಿ ಶೋಧ ನಡೆಸಿದಾಗ 4 ರಿಂದ 9 ವರ್ಷ ವಯಸ್ಸಿನ ಬಾಲಕಿಯರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಅಮೃತಾ ಕುಮಾರಿ, 9, ಶಕ್ತಿ ಕುಮಾರಿ, 7, ಮತ್ತು ಕಾಂಚನ್ ಕುಮಾರಿ, 4 ಭಾನುವಾರ ಸಂಜೆಯಿಂದ ಕಾಣೆಯಾಗಿದ್ದರು. ಅವರ ಪೋಷಕರು ರಾತ್ರಿ ಹುಡಕಲು ಆರಂಭಿಸಿದ್ದರು. ಆನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಂಧರ್ (ಗ್ರಾಮೀಣ) ಪೊಲೀಸ್ ಅಧೀಕ್ಷಕ ಮನ್‌ಪ್ರೀತ್ ಸಿಂಗ್ ಮಾತನಾಡಿ, ಈ ಪ್ರಕರಣದ ತನಿಖೆ ಕೈಗೊಳ್ಳಲಾಗಿದ್ದು, ಸದ್ಯ ಕುಟುಂಬಸ್ಥರು ಹಾಗೂ ಅಕ್ಕಪಕ್ಕದವರ ಹೇಳಿಕೆ ಗಮನಿಸಿದರೆ, ಮೂರು ಸಹೋದರಿಯರು ಆಟವಾಡುವಾಗ ಟ್ರಂಕ್‌ನಲ್ಲಿ ಅಡಗಿಕೊಂಡಂತೆ ತೋರುತ್ತಿದೆ. ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.
ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಮನೆಯ ಹೊರಗೆ ಟ್ರಂಕ್ ಅನ್ನು ನೋಡಿದಾಗ ಕೆಲವರಿಗೆ ಅನುಮಾನ ಬಂದಿತ್ತು. ಟ್ರಂಕ್ ತೆರೆದು ನೋಡಿದಾಗ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ.