ಟೆಲ್ ಅವಿವ್: ಇಸ್ರೇಲ್ ಹಾಗೂ ಹಮಾಸ್ ಉಗ್ರರ ಯುದ್ಧ ತಾರಕಕ್ಕೆ ಏರಿದೆ. ಗಾಜಾ ಪಟ್ಟಿಯಿಂದ ಉಗ್ರರು ದಾಳಿ ನಡೆಸಿ ಮೂರು ದಿನಗಳಾಗಿವೆ. ಇದರ ಮಧ್ಯೆ ಇಸ್ರೇಲ್ ಯುದ್ಧ ಘೋಷಿಸಿತ್ತು. ಸದ್ಯ ಯುದ್ಧ ಭೀಕರತೆ ಪಡೆದಿದ್ದು, ಇಲ್ಲಿಯವರೆಗೆ ಬರೋಬ್ಬರಿ 1,100 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700ಕ್ಕೂ ಅಧಿಕ ಜನರನ್ನು ಕೊಲೆ ಮಾಡಲಾಗಿದೆ. ಹಮಾಸ್ ಆಕ್ರಮಣದ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತೀಕಾರ ತೀರಿಸಿಕೊಳ್ಳುವುದಾಗಿ, ಉಗ್ರಗಾಮಿ ಗುಂಪುಗಳ ಅಡಗುತಾಣಗಳನ್ನು ನಾಶಪಡಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, 413 ಜನರು ಬಲಿಯಾಗಿದ್ದಾರೆ.
ಹಮಾಸ್ ಕೂಡ ಇಸ್ರೇಲ್‌ನ ಮೇಲೆ ಸಾವಿರಾರು ರಾಕೆಟ್‌ಗಳ ದಾಳಿ ಮಾಡಿ ನಾಗರಿಕರನ್ನು ಕೊಲೆ ಮಾಡಿದೆ. 100ಕ್ಕೂ ಅಧಿಕ ಜನರನ್ನು ಒತ್ತೆಯಾಳಾಗಿ ಇಟ್ಟಿರುವ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜಾಗತಿಕವಾಗಿ ಜನರು ಬೆಚ್ಚಿ ಬೀಳುವಂತಾಗಿದೆ.
ಹಮಾಸ್ ದಾಳಿಗೆ ಒಳಗಾದ ಸಂಗೀತ ಉತ್ಸವದ ಪ್ರದೇಶದಲ್ಲಿ ಸುಮಾರು 260 ಶವಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲಿ ರಕ್ಷಣಾ ಸೇವೆ ಝಾಕಾ ತಿಳಿಸಿದೆ