ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ ನಡೆದಿದೆ.
ಇತ್ತೀಚೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿನಿಗೆ ಫೇಲ್ ಆಗುವ ಭಯ ಕಾಡಿತ್ತು. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿಚಾರ ತಿಳಿದ ತಕ್ಷಣ ಸಂಬಂಧಿಕರು ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಖಾಸಗಿ ಆಸ್ಪತ್ರೆಯಲ್ಲಿ ಅಂಬ್ಯಲೆನ್ಸ್ ಸಿಗದ ಕಾರಣಕ್ಕೆ ಆಕೆಯ ಸಹೋದರ ಬೈಕ್ನಲ್ಲಿ ಮತ್ತಿಬ್ಬರ ಸಹಾಯದಿಂದ ಶವವನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಪ್ರಕರಣವು ಕೊಖ್ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯ ಭಾರವಾರಿ ಪುರಸಭೆಯಲ್ಲಿರುವ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಇಲ್ಲಿ ವಾಸಿಸುತ್ತಿದ್ದ 17 ವರ್ಷದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಪರೀಕ್ಷೆ ಚೆನ್ನಾಗಿ ಮಾಡಿಲ್ಲ ಎನ್ನುವ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದಳು. ಇದರಿಂದ ಗುರುವಾರ ವಿದ್ಯಾರ್ಥಿನಿ ತನ್ನ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡಿದ್ದಾಳೆ. ಈ ವಿಷಯ ತಿಳಿದ ತಕ್ಷಣ ಸಂಬಂಧಿಕರು ಬಾಲಕಿಯನ್ನು ಮಂಜನ್ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಈಕೆ ಸಾವು ಕಂಡಿದ್ದಾಳೆ ಎಂದು ವೈದ್ಯರು ತಿಳಿಸಿದ್ದರು.
ಮೃತದೇಹವನ್ನು ತೆಗೆದುಕೊಂಡು ಹೋಗಲು ಆಸ್ಪತ್ರೆಯ ಆಡಳಿತ ಮಂಡಳಿಗೆ ಅಂಬ್ಯುಲೆನ್ಸ್ ನೀಡುವಂತೆ ಕೇಳಿದ್ದರು. ಅರ್ಧ ಗಂಟೆ ಕಾದರೂ ವಾಹನ ಬಂದಿರಲಿಲ್ಲ. ಇದಾದ ಬಳಿಕ ಮೃತನ ಸಹೋದರ ಬಲವಂತದ ಮೇರೆಗೆ ಸಹೋದರಿಯ ಶವವನ್ನು ಬೈಕ್ನಲ್ಲಿ ತೆಗೆದುಕೊಂಡು ಹೋಗಿದ್ದಾನೆ. ಶವ ತೆಗೆದುಕೊಂಡು ಆಸ್ಪತ್ರೆಯಿಂದ ಹೊರಬರುವಾಗಲೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಮಮ್ಮಲ ಮರಗುತ್ತಿದ್ದಾರೆ.