ಬೆಂಗಳೂರು : ನಟ ಕಿಚ್ಚ ಸುದೀಪ್ (Kichcha Sudeep) ಅವರು ಯಾವುದೇ ಪಕ್ಷಕ್ಕೆ ಸೇರದಿದ್ದರೂ ನನ್ನ ಜೊತೆಗೆ ಬಿಜೆಪಿ ಪರವೂ ಪ್ರಚಾರ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುದೀಪ್ ಅವರು ರಾಜಕೀಯದಲ್ಲಿಲ್ಲ, ಚಲನಚಿತ್ರದಲ್ಲಿದ್ದಾರೆ. ಸುದೀಪ್ ಚಲನಚಿತ್ರ ರಂಗದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಸೇರಲ್ಲ. ಆದರೂ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ನನಗೆ ಬೆಂಬಲ ಕೊಡುತ್ತಿದ್ದಾರೆ. ನನ್ನ ಜೊತೆಗೆ ನಮ್ಮ ಪಕ್ಷಕ್ಕೂ ಪ್ರಚಾರ ಮಾಡುತ್ತಾರೆ ಎಂದರು.
ಸುದೀಪ್ ಹಾಗೂ ನಮ್ಮ ಸಂಬಂಧವನ್ನು ಗೌರವಿಸಿ. ನನಗೆ ಮೊದಲಿನಿಂದಲೂ ಸಂಬಂಧ ಇರುವುದರಿಂದ ನಾನು ಅವರ ಜೊತೆ ಮಾತನಾಡಿದ್ದೇನೆ. ನೀನು ನಮ್ಮ ಪಕ್ಷಕ್ಕೆ ಸೇರದಿದ್ದರೂ ನಿಮ್ಮ ಅವಶ್ಯಕತೆ ಇದೆ ಎಂದು ಹೇಳಿದ್ದೇನೆ. ಹೀಗಾಗಿ ನಮಗೋಸ್ಕರ ಅವರು ಪಕ್ಷದ ಪರವೂ ಪ್ರಚಾರ ಮಾಡುತ್ತಾರೆ ಎಂದು ಹೇಳಿದ್ದಾರೆ.
ನಾನು ಹೇಳಿದ ಕಡೆ ನಟ ಸುದೀಪ್ ಪ್ರಚಾರ ಮಾಡುತ್ತಾರೆ. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್ ಪ್ರಚಾರ ಮಾಡುತ್ತಾರೆ. ಇವರ ಪ್ರಚಾರದಿಂದ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಬರುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ನಾನು ಚಿತ್ರರಂಗ ಪ್ರವೇಶಿಸುವಾಗ ಗಾಡ್ ಫಾದರ್ ಅಂತ ಯಾರು ಇರಲಿಲ್ಲ. ಆ ಸಮಯದಲ್ಲಿ ಸಿಎಂ ಬೊಮ್ಮಾಯಿ ಅವರು ನನ್ನ ಪರ ಇದ್ದರು. ನಾನು ಸಿನಿಮಾಗೆ ಎಂಟ್ರಿ ಕೊಟ್ಟಾಗ ಅವರು ರಾಜಕೀಯ ಪ್ರವೇಶಿಸಿದ್ದರು. ಹೀಗಾಗಿ ನಾನು ಅವರ ಪರ ಬಂದಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.
ಪ್ರಚಾರಕ್ಕೆ ಎಲ್ಲ ಕಡೆ ಹೋಗಲು ಆಗಲ್ಲ. ಇಂತವರಿಗೆ ಬೆಂಬಲ ಕೊಡಿ ಎಂದು ಹೇಳಿದರೆ ನಾನು ಕೊಡುತ್ತೇನೆ. ಬಸವರಾಜ ಬೊಮ್ಮಾಯಿ ಯಾವ ಪಕ್ಷದಲ್ಲಿ ಇದ್ದರೂ ಅವರ ಪರವಾಗಿ ನಿಲ್ಲುತ್ತಿದ್ದೆ. ನನ್ನ ಕಷ್ಟದ ದಿನಗಳಲ್ಲಿ ಯಾರಾದರೂ ನನ್ನ ಪರವಾಗಿ ನಿಂತಿದ್ದರೆ ನಾನು ಅವರ ಪರವಾಗಿ ನಿಲ್ಲುತ್ತಿದ್ದೆ ಎಂದು ತಿಳಿಸಿದರು.
ಪ್ರಕಾಶ್ ರೈ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿ, ಪ್ರಕಾಶ್ ರೈ ಅವರು ಒಳ್ಳೆ ಕಲಾವಿದ, ಅವರ ಜೊತೆ ಸಿನಿಮಾ ಮಾಡಿದ್ದೇನೆ. ಮುಂದೆ ಸಿನಿಮಾ ಮಾಡಲು ಕಾತರನಾಗಿದ್ದೇನೆ ಎಂದು ಹೇಳಿದರು.
ನಾನು ಚುನಾವಣೆಗೆ ನಿಲ್ಲುತ್ತಿಲ್ಲ, ನಿಲ್ಲಬೇಕು ಎಂದಾದರೆ ಓಪನ್ ಆಗಿ ಹೇಳಿ ನಿಲ್ಲುತ್ತೇನೆ ಎಂದು ಹೇಳಿದ ಸುದೀಪ್, ಬಸವರಾಜ ಬೊಮ್ಮಾಯಿ ಅವರಿಗೆ ಬೇಕಾದ ವ್ಯಕ್ತಿಗಳ ಪರವಾಗಿ ಅವರು ಹೇಳಿದರೆ ಪ್ರಚಾರ ನಡೆಸುತ್ತೇನೆ. ನಾನು ವ್ಯಕ್ತಿಗೆ ಬೆಂಬಲ ನೀಡುತ್ತಿದ್ದೇನೆಯೇ ಹೊರತು ಬಿಜೆಪಿಗಲ್ಲ ಎಂದು ಹೇಳಿದರು