Guwahati: ನಾಯಕ ಶಿಖರ್ ಧವನ್ (Shikhar Dhawan), ಪ್ರಭ್‌ಸಿಮ್ರಾನ್ ಸಿಂಗ್ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು 5 ರನ್ ಗಳ ರೋಚಕ ಜಯ ಸಾಧಿಸುವ ಮೂಲಕ, ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿದೆ.
ಪಂಜಾಬ್ ಕಿಂಗ್ಸ್ ತಂಡವು (Punjab Kings) ರಾಜಸ್ಥಾನ ರಾಯಲ್ಸ್ (Rajasthan Royals) 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 197 ರನ್ ಗಳಿಸಿತು. 198 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಲಷ್ಟೇ ಶಕ್ತವಾಯಿತು.
15 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿದ್ದ ರಾಜಸ್ಥಾನ್ ತಂಡ ಸಂಕಷ್ಟಕ್ಕೆ ಗುರಿಯಾಗಿತ್ತು. ಆದರೆ 7ನೇ ವಿಕೆಟ್‌ಗೆ ಜೊತೆಯಾದ ಶಿಮ್ರಾನ್ ಹೆಟ್ಮೆಯರ್ ಹಾಗೂ ಧ್ರುವ್ ಜುರೆಲ್ ಭರ್ಜರಿ ಸಿಕ್ಸರ್, ಬೌಂಡರಿ ಸಿಡಿಸಿ ಪಂಜಾಬ್ ಬೌಲರ್‌ಗಳನ್ನ ಬೆಂಡೆತ್ತಿದರು. ಈ ಜೋಡಿ 26 ಎಸೆತಗಳಲ್ಲಿ ಬರೋಬ್ಬರಿ 61 ರನ್ ಚಚ್ಚಿದರು.
18ನೇ ಓವರ್‌ನಲ್ಲಿ 19 ರನ್, 19ನೇ ಓವರ್‌ನಲ್ಲಿ 18 ರನ್ ಬಂದ ಹಿನ್ನೆಲೆಯಲ್ಲಿ ಕೊನೆಯ ಓವರ್ ಅತ್ಯಂತ ರೋಚಕತೆಯಿಂದ ಕೂಡಿತ್ತು. ಕೊನೆಯ 6 ಎಸೆತಗಳಲ್ಲಿ ರಾಜಸ್ಥಾನ್‌ಗೆ 15 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದಲ್ಲಿ ಜುರೆಲ್ ಮೊದಲ ಎಸೆತದಲ್ಲಿ 1 ರನ್ ಕದ್ದರೆ, 2ನೇ ಎಸೆತದಲ್ಲಿ ಹೆಟ್ಮೆಯರ್ 2 ರನ್ ಕದ್ದರು. 3ನೇ ಎಸೆತದಲ್ಲಿ 2ರನ್ ಕದಿಯಲು ಯತ್ನಿಸಿ ಹೆಟ್ಮೆಯರ್ ರನೌಟ್‌ಗೆ ತುತ್ತಾದರು. ಕೊನೆಯ 3 ಎಸೆತಗಳಲ್ಲಿ 13 ರನ್‌ಗಳ ಅಗತ್ಯವಿದ್ದಾಗ 2 ಎಸೆತಗಳಲ್ಲಿ ಒಂದೊಂದು ರನ್‌ಗಳಷ್ಟೇ ಸೇರ್ಪಡೆಯಾಯಿತು. ಕೊನೆಯ ಎಸೆತವನ್ನು ಧ್ರುವ್ ಜುರೆಲ್ ಬೌಂಡರಿಗಟ್ಟಿದರು. ಅಂತಿಮವಾಗಿ ರಾಜಸ್ಥಾನ್ 5 ರನ್‌ಗಳ ವಿರೋಚಿತ ಸೋಲು ಅನುಭವಿಸಿತು.
ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಜೈಸ್ವಾಲ್ 11 ರನ್ ಗಳಿಸಿದರೆ, ಬಟ್ಲರ್ 11 ಎಸೆತಗಳಲ್ಲಿ 19 ರನ್ ಗಳಿಸಿದರು. ಅಶ್ವಿನ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಕಳೆದುಕೊಳ್ಳುತ್ತಿದ್ದರೂ ರನ್ ಕಲೆಹಾಕುತ್ತಾ ತಂಡ ಮುನ್ನಡೆದಿತ್ತು. 4ನೇ ವಿಕೆಟ್‌ಗೆ ಜೊತೆಯಾದ ನಾಯಕ ಸಂಜು ಸ್ಯಾಮ್ಸನ್ ಹಾಗೂ ದೇವದತ್ ಪಡಿಕಲ್ ಉತ್ತಮ ಜೊತೆಯಾಟವಾಡಿದರು. 32 ಎಸೆತಗಳಲ್ಲಿ 34 ರನ್ ಕಲೆಹಾಕಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿತ್ತು.
ಅಷ್ಟರಲ್ಲೇ 42 ರನ್ (25 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿ ಆಟವಾಡುತ್ತಿದ್ದ ಸಂಜು ಸ್ಯಾಮ್ಸನ್ ಸಿಕ್ಸರ್ ಚಚ್ಚಲು ಯತ್ನಿಸಿ ಕ್ಯಾಚ್ ನೀಡಿ ಔಟಾದರು. ಈ ಬೆನ್ನಲ್ಲೇ ರಿಯಾನ್ ಪರಾಗ್ 20 ರನ್ (12 ಎಸೆತ, 2 ಸಿಕ್ಸರ್, 1 ಬೌಂಡರಿ), ದೇವದತ್ ಪಡಿಕಲ್ 21 ರನ್ (26 ಎಸೆತ, 1 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿದರು. ಇದರಿಂದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಗೆಲುವಿನ ಭರವಸೆ ಕೈತಪ್ಪಿತು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್ ಸ್ಫೋಟಕ 36 ರನ್ (18 ಎಸೆತ, 3 ಸಿಕ್ಸರ್, 1 ಬೌಂಡರಿ) ಚಚ್ಚಿದರೆ, ಧ್ರುವ್ 15 ಎಸೆತಗಳಲ್ಲೇ 32 ರನ್ ಬಾರಿಸಿದರು. ಜೇಸನ್ ಹೋಲ್ಡರ್ 1 ರನ್ ಗಳಿಸಿ ಅಜೇಯರಾಗುಳಿದರು.
ಪಂಜಾಬ್ ಕಿಂಗ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ನಾಥನ್ ಎಲ್ಲಿಸ್ ರಾಜಸ್ಥಾನ ತಂಡದ ಪ್ರಮುಖ ಬ್ಯಾಟ್ಸ್‌ಮ್ಯಾನ್‌ಗಳನ್ನ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು. 4 ಓವರ್‌ಗಳಲ್ಲಿ 30 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರೆ, ಅರ್ಶ್ ದೀಪ್ ಸಿಂಗ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ಪರ ಬ್ಯಾಟಿಂಗ್ ಆರಂಭಿಸಿದ ನಾಯಕ ಶಿಖರ್ ಧವನ್ ಮತ್ತು ಪ್ರಭ್‌ಸಿಮ್ರಾನ್ ಸಿಂಗ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 9.1 ಓವರ್‌ಗಳಲ್ಲಿ ಭರ್ಜರಿ 90 ರನ್ ಕಲೆಹಾಕಿತು. ಪ್ರಭ್‌ಸಿಮ್ರಾನ್ ಸಿಂಗ್ ಸ್ಫೋಟಕ 60 ರನ್ (34 ಎಸೆತ, 7 ಬೌಂಡರಿ, 3 ಸಿಕ್ಸರ್) ಗಳಿಸಿ ಔಟ್ ಆದರು. ನಂತರ ಕಣಕ್ಕಿಳಿದ ಭಾನುಕ ರಾಜಪಕ್ಸ 1 ರನ್ ಗಳಿಸಿ ಆಡುತ್ತಿದ್ದಾಗಲೇ ಗಾಯಗೊಂಡು ಹೊರನಡೆದರು. ಬಳಿಕ ಕ್ರೀಸ್‌ಗಿಳಿದ ಜಿತೇಶ್ ಶರ್ಮಾ 16 ಎಸೆತಗಳಲ್ಲಿ 27 ರನ್ (2 ಬೌಂಡರಿ, 1 ಸಿಕ್ಸರ್) ಗಳಿಸಿದರೆ, ಶಾರೂಖ್ ಖಾನ್ 10 ಎಸೆತಗಳಲ್ಲಿ 11 ರನ್ ಗಳಿಸಿ ಕೊನೆಯ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಕೊನೆಯವರೆಗೂ ಹೋರಾಡಿದ ನಾಯಕ ಶಿಖರ್ ಧವನ್ 56 ಎಸೆತಗಳಲ್ಲಿ 86 ರನ್ ಬಾರಿಸಿ (9 ಬೌಂಡರಿ, 3 ಸಿಕ್ಸರ್) ತಂಡದ ಮೊತ್ತ 190 ರನ್ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ರಾಜಸ್ಥಾನ್ ರಾಯಲ್ಸ್ ತಂಡದ ಪರ ಜೇಸನ್ ಹೋಲ್ಡರ್ 4 ಓವರ್‌ಗಳಲ್ಲಿ 29 ರನ್ ನೀಡಿ 2 ವಿಕೆಟ್ ಕಿತ್ತರೆ, ಆರ್. ಅಶ್ವಿನ್ 4 ಓವರ್‌ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು, ಯಜುವೇಂದ್ರ ಚಾಹಲ್ 4 ಓವರ್‌ಗಳಲ್ಲಿ 50 ರನ್ ನೀಡಿ 1 ವಿಕೆಟ್ ಪಡೆದರು.