Dubai : ಶ್ರೀಮಂತರು ತಮಗೆ ಬೇಕಾಗಿರುವ ಹಾಗೂ ಇಷ್ಟವಾಗಿರುವ ವಸ್ತುಗಳ ಬೆಲೆ ಎಷ್ಟೇ ಇದ್ದರೂ ಕೊಳ್ಳುವ ವಿಚಾರ ತಿಳಿದೇ ಇರುತ್ತದೆ. ಅಲ್ಲದೇ, ಐಷಾರಾಮಿ ವಸ್ತುಗಳನ್ನು ಖರೀದಿಸುವ ವಿಚಾರ ಗೊತ್ತೇ ಇರುತ್ತದೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 122 ಕೋಟಿ ರೂ. ನೀಡಿ ಫ್ಯಾನ್ಸಿ ನಂಬರ್ (Fancy Number) ಖರೀದಿ ಮಾಡಿ ವಿಶ್ವದಾಖಲೆ (World Record) ಬರೆದಿದ್ದಾರೆ.

ದುಬೈನಲ್ಲಿ ವಿಐಪಿ ನಂಬರ್ ʼP 7′ ದಾಖಲೆಯ 55 ದಶಲಕ್ಷ ದಿರ್ಹಾಮ್ (ಅಂದಾಜು 122.6 ಕೋಟಿ ರೂ.) ಹರಾಜಾಗಿದೆ. ಫ್ಯಾನ್ಸಿ ʼP 7′ ಸಂಖ್ಯೆಗೆ ಮೂಲಬೆಲೆ 15 ದಶಲಕ್ಷ ದಿರ್ಹಾಮ್ ನಿಗದಿ ಮಾಡಲಾಗಿತ್ತು. ಆದರೆ, ಆರಂಭದ ಕೆಲವೇ ನಿಮಿಷಗಳಲ್ಲಿ ಇದು 30 ದಶಲಕ್ಷ ದಿರ್ಹಾಮ್ಗೆ ಮುಟ್ಟಿತ್ತು. ಕೊನೆಗೆ ಇದು 55 ದಶಲಕ್ಷ ದಿರ್ಹಾಮ್ ಮಾರಾಟವಾಗಿದೆ. ಆದರೆ, ಇಷ್ಟೊಂದು ಹಣ ಖರ್ಚು ಮಾಡಿ ಬಿಡ್ ಗೆದ್ದವರು ಯಾರು? ಹಾಗೂ ಅವರ ಐಡೆಂಟಿಟಿ ಕುರಿತು ಮಾಹಿತಿ ಬಹಿರಂಗವಾಗಿಲ್ಲ.

ಯುಎಇ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ರಂಜಾನ್ ಸಮಯದಲ್ಲಿ 100 ಕೋಟಿ ರೂ. ಉಚಿತ ಊಟ ವಿತರಣೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಸೇವೆಗೆ ಸಹಾಯ ನೀಡಲು ಎಮಿರೆಟ್ಸ್ ಸಂಸ್ಥೆ ಫ್ಯಾನ್ಸಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಹರಾಜು ಹಾಕಿತ್ತು. ಈ ಹರಾಜಿನ ಮೂಲಕ ಒಟ್ಟು 100 ದಶಲಕ್ಷ ದಿರ್ಹಾಮ್ (ಅಂದಾಜು 220 ಕೋಟಿ ರೂ.) ಸಂಗ್ರಹಿಸಲಾಗಿದೆ.

2008ರಲ್ಲಿ ಅಬುಧಾಬಿಯಲ್ಲಿ ʼNo. 1ʼ ಪ್ಲೇಟ್ 52.22 ದಶಲಕ್ಷ ದಿರ್ಹಾಮ್ಗೆ ಬಿಡ್ ಆಗಿತ್ತು. ಇಲ್ಲಿಯವರೆಗೆ ದುಬಾರಿ ಬೆಲೆಗೆ ಹರಾಜಾದದ ಫ್ಯಾನ್ಸಿ ನಂಬರ್ ಆಗಿತ್ತು. ಈಗ ಈ ದಾಖಲೆಯನ್ನು ʼP 7′ ಮುರಿದು, ಹೊಸ ದಾಖಲೆ ಸೃಷ್ಟಿಸಿದೆ.