Hubli : ಬಿಜೆಪಿಯಲ್ಲಿ ಹಿರಿಯ ನಾಯಕರ ಮುನಿಸು ಇನ್ನೂ ಮುಂದುವರೆದಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (Hubli-Dharwad Central) ಕ್ಷೇತ್ರದ ಬಿಜೆಪಿ (BJP) ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ಹಿರಿಯ ನಾಯಕ ಹಾಗೂ ಶಾಸಕ ಜಗದೀಶ್ ಶೆಟ್ಟರ್ (Jagadish Shettar) ತೀವ್ರ ಅಸಮಾಧಾನಗೊಂಡಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರದ ಮಧುರಾ ಕಾಲೋನಿಯಲ್ಲಿನ ನಿವಾಸದಲ್ಲಿ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಾನು 6 ಬಾರಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದೇನೆ. 7ನೇ ಬಾರಿ ಅತ್ಯಧಿಕ ಬಹುಮತದಿಂದ ಗೆಲ್ಲಿಸುವುದಾಗಿ ಜನ ಭರವಸೆ ನೀಡಿದ್ದರು. ಆದರೆ, ಪಕ್ಷ ಈ ಕ್ಷೇತ್ರ ಸೇರಿದಂತೆ 12 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿಲ್ಲ. ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿ ಬಂದಿರುವೆ. ನನಗೆ ಅಧಿಕಾರದ ದಾಹವಿಲ್ಲ, ಜನ ಸೇವೆ ಮಾಡಲು ಅವಕಾಶ ಕೇಳಿದ್ದೇನೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಬಂದು ಹೋಗಿದ್ದಾರೆ. ಕೇಂದ್ರದ ನಾಯಕರು ನನಗೆ ಟಿಕೆಟ್ ಘೋಷಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಹೀಗಾಗಿ ಅವರು ತಮ್ಮ ನಿವಾಸದಲ್ಲಿ ಇಂದು ಬೆಂಬಲಿಗರ ಜೊತೆ ಸಭೆ ನಡೆಸಿ ಭಾವುಕ ಮಾತುಗಳನ್ನು ಆಡಿದ್ದಾರೆ. ಬಿಜೆಪಿ (BJP) ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ಹೀಗಾಗಿ ನಾನು ಪಕ್ಷಕ್ಕೆ ಋಣಿಯಾಗಿರುವೆ. ಶಾಸಕ, ಸಚಿವ, ವಿಪಕ್ಷ ನಾಯಕ, ಸ್ಪೀಕರ್, ಸಿಎಂ ಆಗಿ ಸೇವೆ ಮಾಡಿದ್ದೇನೆ. ಇದುವರೆಗೆ 6 ಬಾರಿ ಚುನಾವಣೆಗೆ ಸ್ಪರ್ಧಿಸಿ ಬಹುಮತದಿಂದ ಗೆದ್ದಿದ್ದೇನೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.
ಹು-ಧಾ ಸೆಂಟ್ರಲ್ ಕ್ಷೇತ್ರದ ಜನರ, ನನ್ನ ಸ್ವಾಭಿಮಾನದ ಪ್ರಶ್ನೆ ಇದಾಗಿದೆ. ಟಿಕೆಟ್ ಘೋಷಣೆಗೆ ಇಂದು ಸಂಜೆಯವರೆಗೆ ಟೈಮ್ ಇದೆ. ನನಗೆ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ. ಈ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳಸಲು ಶ್ರಮಿಸಿದವರಲ್ಲಿ ನಾನು ಒಬ್ಬ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಬಿಜೆಪಿ ನಾಯಕ ಅನಂತ ಕುಮಾರ ಅವರ ಜೊತೆಗೆ ಪಕ್ಷ ಕಟ್ಟಿದ್ದೇನೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ಬೆಳಗಾವಿ ಸೇರಿ ರಾಜ್ಯದ ನಾನ ಕಡೆ ಜನ ನನಗೆ ಟಿಕೆಟ್ ಘೋಷಣೆಯಾಗದ ಕಾರಣಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ದಿನದ ಹಿಂದೆ ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿದ್ದರು. ನಾನು ಅವರಿಗೆ ಗೌರವ ಕೊಟ್ಟು ಹೋಗಿ ಬಂದೆ. ನಾನು ರಾಜಕೀಯಕ್ಕೆ ಬಂದಿದ್ದು ಆ್ಯಕ್ಸಿಡೆಂಡ್ಲಿ. ಅವಕಾಶ ಸಿಕ್ತು ಸದುಪಯೋಗ ಮಾಡಿಕೊಂಡೆ. ನಾನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಇನ್ನೊಂದು ಬಾರಿ ಅವಕಾಶ ಕೊಡಿ ಎಂದಿದ್ದೆ. ಎರಡು ದಿನದಲ್ಲಿ ತಿಳಿಸುತ್ತೇನೆ ಎಂದಿದ್ದಾರೆ. ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಯಡಿಯೂರಪ್ಪ ಅವರ ಬೆಂಬಲ ನನಗೆ ಇದೆ. ಯಡಿಯೂರಪ್ಪ ಸ್ಪರ್ಧೆ ಮಾಡಿ ಎಂದು ಒಪನ್ ಆಗಿ ಹೇಳಿದ್ದಾರೆ. ನನಗೆ ನಿಮ್ಮ ಶಕ್ತಿ ಇದೆ ಎಂದು ಹೇಳಿದ್ದಾರೆ.