IPL 2023 RCB vs CSK: ಐಪಿಎಲ್ನ 24ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಾದಾಟ ನಡೆಸಲಿವೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಏನಾದರೂ ಮಿಂಚಿದರೆ ಮತ್ತೆರಡು ದಾಖಲೆಗಳು ಅವರ ಪಾಲಾಗಲಿವೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 21 ರನ್ ಗಳನ್ನು ಗಳಿಸಿದರೆ ಚೆನ್ನೈ ವಿರುದ್ಧ 1000 ರನ್ ಪೂರೈಸಿದ ಮೊದಲ ಆರ್ ಸಿಬಿ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ 979 ರನ್ ಕಲೆಹಾಕಿರುವ ಕೊಹ್ಲಿಗೆ ಕೇವಲ 21 ರನ್ ಗಳ ಅವಶ್ಯಕತೆಯಿದೆ. ಅಲ್ಲದೇ, ಈ ಪಂದ್ಯದಲ್ಲಿ ಮೂರು ಬೌಂಡರಿ ಬಾರಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 600 ಬೌಂಡರಿಗಳನ್ನು ಸಿಡಿಸಿದ ವಿಶೇಷ ದಾಖಲೆಯೊಂದು ವಿರಾಟ್ ಕೊಹ್ಲಿಯ ಪಾಲಾಗಲಿದೆ.

ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿಯಿಂದ ಭರ್ಜರಿ ಬ್ಯಾಟಿಂಗ್ ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿ ಎರಡು ದಾಖಲೆಗಳನ್ನು ಮಾಡಲಿ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಐಪಿಎಲ್ ನಲ್ಲಿ ಬೆಂಗಳೂರು ಹಾಗೂ ಚೆನ್ನೈ ತಂಡಗಳು ಒಟ್ಟು 30 ಬಾರಿ ಸೆಣಸಾಟ ನಡೆಸಿವೆ. ಈ ಸಂದರ್ಭದಲ್ಲಿ ಆರ್ಸಿಬಿ ಕೇವಲ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಒಂದರಲ್ಲಿ ಮಾತ್ರ ಪಂದ್ಯ ರದ್ದಾಗಿದೆ. ಇನ್ನುಳಿದ 19 ಪಂದ್ಯಗಳನ್ನು ಚೆನ್ನೈ ಗೆದ್ದಿದೆ.