Mysore : ಕೃಷ್ಣರಾಜ ಕ್ಷೇತ್ರದಿಂದ ಹಾಲಿ ಶಾಸಕ ರಾಮದಾಸ್ ಅವರನ್ನು ಕೈ ಬಿಡಲಾಗಿದೆ. ಹೀಗಾಗಿ ಅವರು ತೀವ್ರ ಸಂಕಟ ವ್ಯಕ್ತಪಡಿಸಿದ್ದಾರೆ.
ಎಸ್.ಎ. ರಾಮದಾಸ್‌ಗೆ (SA Ramadas) ಟಿಕೆಟ್ ಕೈತಪ್ಪಿದ್ದು, ಶ್ರೀವತ್ಸ (TS Srivatsa) ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ಅಸಮಾಧಾನ ಹೊರಹಾಕಿರುವ ರಾಮದಾಸ್, 30 ವರ್ಷದಿಂದ ಇದ್ದ ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ ಎಂದು ಭಾವುಕರಾಗಿ ಮಾತನಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಹಾಗೂ ಸಂಸದ ಪ್ರತಾಪ್ ಸಿಂಹ (Pratap Simha) ರಾಮದಾಸ್ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಾಮದಾಸ್ ತಾವು ಯಾರೊಂದಿಗೂ ಮಾತನಾಡುವುದಿಲ್ಲ ಎಂದು ಹೇಳಿ ಅವರನ್ನು ಹಾಗೆಯೇ ಕಳುಹಿಸಿದ್ದಾರೆ.

30 ವರ್ಷದಿಂದ ಇದ್ದ ತಾಯಿ ಮನೆಯಿಂದ ನನ್ನನ್ನು ಓಡಿಸಿದ್ದಾರೆ. ಈಗ ಆ ಮನೆಯಲ್ಲಿ ನಾನು ಇರಬೇಕಾ ಅಥವಾ ಬೇಡವಾ ಎಂಬುವುದನ್ನು ಚರ್ಚಿಸಿ ನಿರ್ಧಾರ ಮಾಡುತ್ತೇನೆ. ನಾನು ಸದ್ಯ ಯಾರನ್ನೂ ಭೇಟಿ ಮಾಡಲ್ಲ ಎಂದ ರಾಮದಾಸ್ ಮನೆಗೆ ಬಂದಿದ್ದ ಶ್ರೀವತ್ಸ ಹಾಗೂ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡದೇ ಮನೆಯ ಮತ್ತೊಂದು ಬಾಗಿಲಿನಿಂದ ಹೊರನಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ನಾವು ರಾಮದಾಸ್ ಅವರ ಆಶೀರ್ವಾದ ಪಡೆಯಲು ಮನೆಗೆ ಬಂದಿದ್ದೆವು. ಟಿಕೆಟ್ ತಪ್ಪಿರುವ ಕಾರಣ ಅವರಿಗೆ ನೋವಾಗಿದೆ. 30 ವರ್ಷಗಳಿಂದ ಇದ್ದ ಅವಕಾಶ ಕೈ ತಪ್ಪಿದ ಕಾರಣ ರಾಮದಾಸ್ ಅವರಿಗೆ ಬೇಸರ ಆಗಿರುವುದು ಸಹಜ ಎಂದು ಹೇಳಿದ್ದಾರೆ.