NewDelhi : ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದಲೂ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂಬ ಮಾತನ್ನು ಪ್ರತಿಯೊಬ್ಬರು ಕೇಳಿದ್ದರು. ಅಲ್ಲದೇ, ಪ್ರಧಾನಿ ಕೂಡ ಈಗಲೂ ಅಷ್ಟೇ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಈಗ ಅವರ ಪ್ರಯಾಣದ ವೇಳಾ ಪಟ್ಟಿ ನೋಡಿದರೆ, ದೇಶದ ಪ್ರತಿಯೊಬ್ಬರೂ ದಂಗಾಗದೆ ಇರದು.

ಎರಡು ದಿನಗಳಲ್ಲಿ ಪ್ರಧಾನಿ ಸತತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ ಸತತ ಪ್ರಯಾಣ ಕೂಡ ಮಾಡಲಿದ್ದಾರೆ. 36 ಗಂಟೆಗಳಲ್ಲಿ ಪ್ರಧಾನಿ ಮೋದಿ ಬರೋಬ್ಬರಿ 5,300 ಕಿಲೋಮೀಟರ್ ಪ್ರಯಾಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ 8 ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. 7 ವಿವಿಧ ನಗರಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪ್ರಧಾನಿ ಅವರ ಈ ಕಾರ್ಯಕ್ರಮದ ವೇಳಾಪಟ್ಟಿ ದೆಹಲಿಯಿಂದ ಆರಂಭಗೊಂಡು ದಕ್ಷಿಣ ಕೇರಳದವರೆಗೂ ನಡೆಯಲಿದೆ. ಇದನ್ನೆಲ್ಲ ನೋಡಿದರೆ, ಅವರ ಚೈತನ್ಯದ ಕುರಿತು ಎಲ್ಲರೂ ಚರ್ಚಿಸುತ್ತಿದ್ದಾರೆ. ಏ. 24 ರಂದು ಬೆಳಗ್ಗೆ ದೆಹಲಿಯಿಂದ ಪ್ರಧಾನಿ ಮೋದಿ ಮಧ್ಯ ಪ್ರದೇಶಕ್ಕೆ ಆಗಮಿಸಲಿದ್ದಾರೆ. ಮಧ್ಯಪ್ರದೇಶದ ಐತಿಹಾಸಿಕ ಪ್ರಸಿದ್ಧ ಕಜುರಾಹೋಗೆ ಆಗಮಿಸಲಿದ್ದಾರೆ. ಇದು ದೆಹಲಿಯಿಂದ 500 ಕಿಲೋಮೀಟರ್ ದೂರದಲ್ಲಿದೆ. ನಂತರ ಅಲ್ಲಿನ ರೇವಾ ಜೆಲ್ಲಿಗೆ ತೆರಳಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರೇವಾದಿಂದ ಮತ್ತೆ ಖಜುರಾಹೋ ಮರಳಲಿದ್ದಾರೆ. ಇದು 280 ಕಿಲೋಮೀಯರ್ ದೂರದ ಪ್ರಯಾಣ.

ಖಜುರಾಹೋದಿಂದ ಕೇರಳದ ಕೊಚ್ಚಿಗೆ ಪ್ರಯಾಣ ಬೆಳೆಸಲಿದ್ದಾರೆ. 1,700 ಕಿಲೋಮೀಟರ್ ವಾಯುಮಾರ್ಗದ ಮೂಲಕ ಮೋದಿ ಸಂಚಾರ ಮಾಡಿ ಯುವ ಕಾಂಕ್ಲೇವ್‌ನಲ್ಲಿ ಭಾಗವಹಿಸಲಿದ್ದಾರೆ. 24 ರಂದು ಅಲ್ಲಿಯೇ ತಂಗಲಿದ್ದಾರೆ. ಏಪ್ರಿಲ್ 25ರ ಬೆಳಿಗ್ಗೆ ಕೊಚ್ಚಿಯಿಂದ 190 ಕಿಲೋಮೀಟರ್ ದೂರದಲ್ಲಿರುವ ತಿರುವನಂತಪುರಂಗೆ ತೆರಳಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಗುಜರಾತ್ ನ ಸೂರತ್ ಮಾರ್ಗವಾಗಿ ಸಿಲ್ವಾಸಕ್ಕೆ ತೆರಳಲಿದ್ದಾರೆ. ಅಲ್ಲಿಗೆ 1,570 ಕಿಲೋಮೀಟರ್ ಪ್ರಯಾಣವಾಗಲಿದೆ. ಅಲ್ಲಿ ನಮೋ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ಬಳಿಕ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ.

ನಂತರ ಸೂರತ್‌ಗೆ ಮರಳಲಿರುವ ಪ್ರಧಾನಿ, ಸೂರತ್ ನಿಂದ ದಮನ್ ಗೆ ತೆರಳಲಿದ್ದಾರೆ. ಈ ಪ್ರಯಾಣ 110 ಕಿ.ಮೀಟರ್. ದಮನ್‌ನಲ್ಲಿ ದೇವ್ಕಾ ಸೀಫ್ರಂಟ್ ಉದ್ಘಾಟಿಸಲಿದ್ದಾರೆ. ಬಳಿಕ 940 ಕಿಲೋಮೀಟರ್ ಪ್ರಯಾಣದ ಮೂಲಕ ದೆಹಲಿಗೆ ಮರಳಲಿದ್ದಾರೆ. ಹೀಗೆ ಮೋದಿ ಒಟ್ಟಾರೆ 36 ಗಂಟೆಗಳಲ್ಲಿ 5,300ಕಿ.ಮೀಟರ್ ಪ್ರಯಾಣ ಮಾಡಿ, ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.