Belagavi : ನನ್ನ ಹೇಳಿಕೆಯನ್ನು ಬೇರೆ ರೀತಿಯಾಗಿ ತಿರುಚಿ, ವೀರಶೈವ ಲಿಂಗಾಯತರನ್ನು (Veerashaiva Lingayats) ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿರುಚುತ್ತಲೇ ಇದ್ದಾರೆ.
ನಾನು ಹೇಳಿದ್ದು ವೀರಶೈವ ಲಿಂಗಾಯತರಲ್ಲಿ ಎಲ್ಲರೂ ಪ್ರಮಾಣಿಕರಾಗುತ್ತಿದ್ದರು. ಆದರೆ ಬಸವರಾಜ ಬೊಮ್ಮಾಯಿ (Basavaraj Bommai) ಭ್ರಷ್ಟ ಸಿಎಂ ಎಂದು ಹೇಳಿದ್ದೇನೆ. ‘ವಾಟ್ ಇಸ್ ರಾಂಗ್ ಇನ್ ದ್ಯಾಟ್?’ (ಅದರಲ್ಲಿ ತಪ್ಪೇನಿದೆ?) ಅದು ಜಾತಿ ವಿರುದ್ಧ ಹೇಳಿದ್ದೀನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿ ಕಿಡಿಕಾರಿದ್ದಾರೆ.
ಶೆಟ್ಟರ್ ಹಾಗೂ ಸವದಿ ಪಕ್ಷ ಬಿಟ್ಟಿದ್ದು, ಸಮುದ್ರದಲ್ಲಿನ ಒಂದು ಲೋಟ ನೀರು ತಗೆದಂತೆ ಎಂಬ ಬಿಜೆಪಿಯ ಹೇಳಿಕೆ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ವಿರುದ್ಧ ಜನರು ಮಾತನಾಡುತ್ತಿದ್ದಾರೆ. ಈ ಬಾರಿ ನಮ್ಮ ಅಭ್ಯರ್ಥಿಗೆ ಹೆಚ್ಚು ಅವಕಾಶ ಇದೆ. ಕರ್ನಾಟಕದಲ್ಲಿ 130 ಕ್ಕೂ ಹೆಚ್ಚು ಸ್ಥಾನ ಬಹುತೇಕ 150 ಸ್ಥಾನ ಗೆಲ್ಲುತ್ತೇವೆ ಎಂದು ತಿಳಿಸಿದರು.