ಅಗ್ದಲ್‌ಪುರ : ಪ್ರೀತಿಸಿದ ಯುವಕ ಬೇರೆ ಯುವತಿಯೊಂದಿಗೆ ವಿವಾಹವಾಗಲು ಮುಂದಾಗಿದ್ದಕ್ಕೆ ಆಕ್ರೋಶಗೊಂಡ ಯುವತಿ, ಆಸಿಡ್ ಎಸೆದಿರುವ ಘಟನೆ ಛತ್ತೀಸ್ ಗಡಧ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಬಸ್ತಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಪಾಲ್ ತಿಳಿಸಿದ್ದಾರೆ.

ಛೋಟೆ ಅಮಾಬಲ್ ಗ್ರಾಮದಲ್ಲಿ ವರ ದಮೃಧರ್ ಬಘೇಲ್ (25) 19 ವರ್ಷದ ಯುವತಿಯೊಂದಿಗೆ ವಿವಾಹವಾಗುತ್ತಿದ್ದಾಗ ಈ ಘಟನೆ ನಡೆದಿದೆ. ದಾಳಿಯಲ್ಲಿ ವಧು ಹಾಗೂ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 10 ಜನರು ಗಾಯಗೊಂಡಿದ್ದಾರೆ.

ಸಂಜೆ ವೇಳೆ ವಿದ್ಯುತ್ ಇಲ್ಲದ ಸಮಯದಲ್ಲಿ ಘಟನೆ ಸಂಭವಿಸಿದ್ದರಿಂದ ಜನರು ಆರೋಪಿಯನ್ನು ನೋಡಲು ಸಾಧ್ಯವಾಗಿಲ್ಲ. ವರನ ಮಾಜಿ ಪ್ರೇಮಿ ಆಸಿಡ್ ದಾಳಿ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದ ನಂತರ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಾಲ್ ಮಾಹಿತಿ ನೀಡಿದರು.

ಅನೇಕ ವರ್ಷಗಳಿಂದ ತನ್ನೊಂದಿಗೆ ಸಂಬಂಧ ಹೊಂದಿದ್ದ ಬಘೇಲ್, ತನಗೆ ಮೋಸ ಮಾಡಿ, ಬೇರೊಂದು ಯುವತಿ ಜೊತೆಗೆ ವಿವಾಹವಾಗುತ್ತಿದ್ದರಿಂದ ಮೆಣಸಿನಕಾಯಿ ತೋಟದಿಂದ ಆಸಿಡ್ ಕದ್ದು ದಾಳಿ ನಡೆಸಿದ್ದಾನೆ ಎಂದು ಯುವತಿ ಹೇಳಿದ್ದಾಳೆ. ಅಲ್ಲದೇ, ಗುರುತು ಸಿಗಬಾರದು ಎಂಬ ಕಾರಣಕ್ಕೆ ಪುರುಷರ ವೇಷ ಧರಿಸಿದ್ದೆ ಎಂದು ಕೂಡ ಹೇಳಿದ್ದಾಳೆ.