ತಿರುವನಂತಪುರಂ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ವಾಟರ್ ಮೆಟ್ರೋ(Water Metro) ಹಾಗೂ ತಿರುವನಂತಪುರಂ (Thiruvananthapuram)- ಕಾಸರಗೋಡು (Kasargod) ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲಿಗೆ (Vande Bharat Express Train) ಚಾಲನೆ ನೀಡಿದ್ದಾರೆ.

ತಿರುವನಂತಪುರಂ ಸೆಂಟ್ರಲ್ ಸ್ಟೇಷನ್‌ನಿಂದ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಅವರು ಇಂದು ಬೆಳಿಗ್ಗೆ ಚಾಲನೆ ನೀಡಿದ್ದಾರೆ. ನಂತರ ಕೊಚ್ಚಿಗೆ (Kochi) ತೆರಳಿ ದೇಶದ ಮೊದಲ ವಾಟರ್ ಮೆಟ್ರೋಗೆ ಚಾಲನೆ ನೀಡಿದರು. ಕೇರಳದ ಮೊದಲ ವಂದೇ ಭಾರತ್ ರೈಲು ರಾಜಧಾನಿ ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶ್ಯೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ಸೇರಿದಂತೆ ಒಟ್ಟು ಆ ರಾಜ್ಯದ 11 ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (PMO) ಹೇಳಿದೆ.

ಕೊಚ್ಚಿಯಲ್ಲಿ ಆರಂಭವಾಗಿರುವ ಪ್ರಾರಂಭವಾಗಿರುವ ನೀರಿನ ಮೆಟ್ರೋ ಯೋಜನೆ ಕೊಚ್ಚಿ ಮತ್ತು ಸುತ್ತಮುತ್ತಲಿನ ಊರಿನ ಜನರಿಗೆ ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಪ್ರಯಾಣ ನೀಡಲಿದೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ನೀರಿನ ಮೆಟ್ರೋ ಯೋಜನೆ ಮೊದಲ ಹಂತದಲ್ಲಿ 2 ಮಾರ್ಗಗಳಲ್ಲಿ 8 ವಿದ್ಯುತ್ ಹೈಬ್ರಿಡ್ ದೋಣಿಗಳೊಂದಿಗೆ ನೌಕಾಯಾನವನ್ನು ಪ್ರಾರಂಭಿಸುತ್ತದೆ. ಹೈಕೋರ್ಟ್‌ನಿಂದ ವೈಪಿನ್‌ವರೆಗಿನ ಏಕಮುಖ ಪ್ರಯಾಣಕ್ಕೆ 20 ರೂ. ಇದ್ದು, ವೈಟ್ಟಿಲದಿಂದ ಕಾಕ್ಕನಾಡು ಮಾರ್ಗಕ್ಕೆ 30 ರೂ. ನಿಗದಿಪಡಿಸಲಾಗಿದೆ.

1,137 ಕೋಟಿ ರೂ. ಅನುದಾನದಲ್ಲಿ ಈ ಯೋಜನೆ ಜಾರಿಯಾಗಿದೆ. ನಗರದ 10 ದ್ವೀಪಗಳ ಸುತ್ತ ಈ ಮೆಟ್ರೋ ಸಂಚಾರ ಮಾಡಲಿದೆ. 38 ಟರ್ಮಿನಲ್‌ಗಳ ಮೂಲಕ ಪ್ರಯಾಣಿಕರಿಗೆ ಸೇವೆ ನೀಡಲಿದೆ. 78 ಕಿ.ಮೀ. ವ್ಯಾಪಿಸಿದ್ದು, ಇಲ್ಲಿನ ದ್ವೀಪಗಳಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.