Mumbai : ಸತತ ಸೋಲಿನಿಂದ ಕಂಗೆಟ್ಟಿರುವ ಹೈದರಾಬಾದ್ ತಂಡಕ್ಕೆ ಮತ್ತೊಂದು ತಲೆನೋವು ಶುರುವಾಗಿದೆ. ಪ್ಲೇ ಆಫ್ ಹಾದಿ ಕಠಿಣವಾಗಿಸಿಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಸ್ಟಾರ್ ಆಲ್ ರೌಂಡರ್ ಆಟಗಾರ ವಾಷಿಂಗ್ಟನ್ ಸುಂದರ್ (Washington Sundar) ಟೂರ್ನಿಯಿಂದ ಹೊರಗೆ ಉಳಿದಿದ್ದಾರೆ.
ಈ ಕುರಿತು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೈದರಾಬಾದ್ ತಂಡ ಹೇಳಿಕೊಂಡಿದೆ. ಮಂಡಿರಜ್ಜು ಗಾಯದಿಂದಾಗಿ ವಾಷಿಂಗ್ಟನ್ ಸುಂದರ್ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಅಲ್ಲದೇ, ಆದಷ್ಟು ಬೇಗ ಗುಣಮುಖರಾಗಿ ವಾಷಿ ಎಂದು ಹಾರೈಸಿದೆ.
ಈ ಐಪಿಎಲ್ ನಲ್ಲಿ ವಾಷಿಂಗ್ಟನ್ ಸುಂದರ್ ಅಷ್ಟೊಂದು ಹೇಳಿಕೊಳ್ಳುವಂತಹ ಫಾರ್ಮ್ ಮುಂದುವರೆಸಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಕೊನೆಯ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ 4 ಓವರ್ ಗಳಿಗೆ 28 ರನ್ ನೀಡಿದ್ದ ವಾಷಿಂಗ್ಟನ್, ಬ್ಯಾಟಿಂಗ್ನಲ್ಲಿ 15 ಎಸೆತಗಳಲ್ಲಿ 24 ರನ್ ಗಳನ್ನು ಸಿಡಿಸಿದ್ದರು. ಇದರ ಹೊರತಾಗಿ ಈ ಪಂದ್ಯವನ್ನು ಹೈದರಾಬಾದ್ ಸೋತಿತ್ತು.
ಈ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ ವಾಷಿಂಗ್ಟನ್ ಸುಂದರ್ 60 ರನ್ ಗಳಿಸಿ, ಕೇವಲ 3 ವಿಕೆಟ್ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ್ದ ಬ್ರಿಯಾನ್ ಲಾರಾ, ವಾಷಿಂಗ್ಟನ್ ಸುಂದರ್ ಅದ್ಭುತ ಆಲ್ರೌಂಡರ್ ಆಗಬೇಕೆಂದು ಫ್ರಾಂಚೈಸಿ ಬಯಸುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು.