ಲಿಂಗಾಯತ ಮತದಾರ…ಲಿಂಗಾಯತ ನಾಯಕ….ಲಿಂಗಾಯತ ಸಚಿವ…ಲಿಂಗಾಯತ ಸಿಎಂ…!! ಸದ್ಯದ ರಾಜಕೀಯ ಕಣದಲ್ಲಿ ಹೆಚ್ಚಾಗಿ ಮಾರ್ದನಿಸುತ್ತಿರುವ ಪದವಾಗಿದೆ. ಇದು ನಾಯಕರ, ಪಕ್ಷಗಳ ಅಜೆಂಡಾ ಕೂಡ ಆಗಿ ಬಿಟ್ಟಿದೆ. ರಾಜ್ಯದ ಮತದಾರರ ಪೈಕಿ ದೊಡ್ಡ ಬಾಹುಳ್ಯ ಹೊಂದಿರುವ ಈ ಸಮುದಾಯದ ಮತದಾರರನ್ನು ಸೆಳೆಯುವುದಕ್ಕಾಗಿಯೇ ಎಲ್ಲ ಪಕ್ಷಗಳು ಈಗ ತಂತ್ರ- ಪ್ರತಿತಂತ್ರ ಹೆಣೆಯುತ್ತಿವೆ. ಹೀಗಾಗಿಯೇ ಗಾಳ ಹಾಕಿ ಮೀನು ಹಿಡಿದಂತೆ ಲಿಂಗಾಯತ- ಒಕ್ಕಲಿಗರನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ.

ಆದರೆ, ರಾಜಕೀಯ ನಾಯಕರನ್ನು ನಾವು ಸುಲಭವಾಗಿ ತಿಳಿದುಕೊಳ್ಳುವಂತಿಲ್ಲ. ಎಲ್ಲಿ ಯಾವ ಮಂತ್ರ ಬಿತ್ತಿದರೆ, ಯಾವ ಹಣ್ಣು ಫಲ ನೀಡುತ್ತದೆ ಎಂಬುವುದು ಅವರಿಗೆ ಗೊತ್ತು. ಹೀಗಾಗಿಯೇ ಯಾವ ಭೂಮಿಯಲ್ಲಿ ಯಾವ ಬೀಜ ಬಿತ್ತಬೇಕು ಎಂಬುವುದು ಪಕ್ಷದ ನಾಯಕರಿಗೆ ಸ್ಪಷ್ಟವಾಗಿ ಗೊತ್ತು. ಉತ್ತರ ಕರ್ನಾಟಕದಲ್ಲಿ ಪ್ರತಿ ಕ್ಷಣ ಲಿಂಗಾಯತ ಬೀಜ ಬಿತ್ತಿದರೆ, ದಕ್ಷಿಣ ಕರ್ನಾಟಕದಲ್ಲಿ ಕೂಡಲೇ ಒಕ್ಕಲಿಗ ಬೀಜ ಬಿತ್ತುತ್ತಾರೆ. ಅಲ್ಲಲ್ಲಿ ಬಳಕೆಗೆ ತಕ್ಕಂತೆ ಓಬಿಸಿ, ಅಲ್ಪಸಂಖ್ಯಾತ, ಎಸ್ಸಿ-ಎಸ್ಟಿ ಹೀಗೆ ಬೀಜ ಬಿತ್ತುವುದು ಅವರಿಗೆ ಕರಗತವಾಗಿ ಬಿಟ್ಟಿದೆ.

ಸದ್ಯ ಎಲ್ಲ ಪಕ್ಷಗಲೂ ಲಿಂಗಾಯತರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಟ್ಟು ಮಾತನಾಡುತ್ತಿವೆ. ಹೆಚ್ಚಿನ ಕ್ಷೇತ್ರಗಳನ್ನು ಲಿಂಗಾಯತರಿಗೆ ನೀಡಲಾಗಿದೆ ಎಂದು ಹೇಳುತ್ತಿವೆ. ಆದರೆ, ಅದು ಎಲ್ಲಿ? ಏಕೆ? ಎನ್ನುವುದು ಮುಖ್ಯ. ಉತ್ತರ ಕರ್ನಾಟಕ ಭಾಗದಲ್ಲಿಯೇ ಲಿಂಗಾಯತ ಸಮುದಾಯದವರಿಗೆ ಹೆಚ್ಚಿನ ಕ್ಷೇತ್ರಗಳನ್ನು ಕೊಟ್ಟಿರುವ ರಾಜ್ಯದ ಎಲ್ಲ ಪಕ್ಷಗಳೂ ಬೆಂಗಳೂರು ಶಕ್ತಿ ಕೇಂದ್ರದಲ್ಲಿ ಮಾತ್ರ ಲಿಂಗಾಯತರನ್ನು ದೂರ ತಳ್ಳಿ ಬಿಟ್ಟಿದೆ. ಇಲ್ಲಿ ಲಿಂಗಾಯತ ಬೀಜವನ್ನು ತಿಪ್ಪೆಗೆ ಎಸೆಯಲಾಗಿದೆ.

ರಾಜ್ಯದಲ್ಲಿಯೇ ಅತೀ ಹೆಚ್ಚು ಕ್ಷೇತ್ರ ಹೊಂದಿರುವ ಬೆಂಗಳೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಒಬ್ಬರೇ ಒಬ್ಬ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಪಕ್ಷವು ಲಿಂಗಾಯತ 67, ಕಾಂಗ್ರೆಸ್ 51 ಹಾಗೂ ಜೆಡಿಎಸ್ 44 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಆದರೆ, ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಒಬ್ಬರೇ ಒಬ್ಬ ಲಿಂಗಾಯತರಿಗೆ ಟಿಕೆಟ್ ನೀಡಿಲ್ಲ. ಹಾಗಂತ ಬೆಂಗಳೂರಿನಲ್ಲಿ ಲಿಂಗಾಯತ ಮತದಾರರೇ ಇಲ್ಲ ಅಂತಲ್ಲ. ರಾಜಧಾನಿಯ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಕೂಡ ಲಿಂಗಾಯತರೇ ಪ್ರಾಭಲ್ಯ. ಲಿಂಗಾಯತರೇ ನಿರ್ಣಾಯಕ! ಆದರೂ ಇಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡುವ ಧೈರ್ಯವನ್ನು ಯಾರೂ ಮಾಡಿಲ್ಲ. ಉತ್ತರ ಕರ್ನಾಟಕದಲ್ಲಿ ತೋರಿದ ಇವರ ಲಿಂಗಾಯತ ಅಜೆಂಡಾ ಇಲ್ಲಿ ಏಕೆ ಗೌಣವಾಯಿತು? ಇಲ್ಲಿ ಏಕೆ ಇವರಿಗೆ ಲಿಂಗಾಯತರು ಬೇಡ ಎಂದು ಸದ್ಯ ಲಿಂಗಾಯತರು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು ಅಷ್ಟೇ ಅಲ್ಲದೇ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಹಲವು ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕವಾಗಿದ್ದರೂ ಅಲ್ಲಿ ಲಿಂಗಾಯತರಿಗೆ ಮಣೆ ಹಾಕಿಲ್ಲ. ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಲಿಂಗಾಯತರೇ ಹೆಚ್ಚಿನ ಮತದಾರರಿದ್ದಾರೆ. ಇಲ್ಲಿ ಅವರ ಪ್ರಾಭಲ್ಯ. ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಲಿಂಗಾಯತರೇ ನಿರ್ಣಾಯಕವಾಗಿದ್ದು, ಅಲ್ಲಿ 45 ಸಾವಿರಕ್ಕೂ ಅಧಿಕ ಲಿಂಗಾಯತ ಮತದಾರರಿದ್ದಾರೆ. ಅಲ್ಲಿ ಅಭ್ಯರ್ಥಿಯ ಸೋಲು- ಗೆಲುವು ನಿಂತಿರುವುದು ಲಿಂಗಾಯತರ ಕೈಯಲ್ಲಿ. ಇನ್ನೂ ಗೋವಿಂದರಾಜನಗರ, ಮಹಾಲಕ್ಷ್ಮೀ ಲೇಔಟ್, ಜಯನಗರ, ಯಶವಂತಪುರ ಕ್ಷೇತ್ರಗಳಲ್ಲಿ 20 ಸಾವಿರಕ್ಕೂ ಅಧಿಕ ಲಿಂಗಾಯತ ಮತದಾರರು ಇದ್ದಾರೆ. ಆದರೂ ಇಲ್ಲಿ ಲಿಂಗಾಯತ ನಾಯಕರಿಗೆ ಮಣೆ ಹಾಕಿಲ್ಲ.

ಒಂದೇ ಒಂದು ಪಕ್ಷ ಕೂಡ ಇಲ್ಲಿ ಲಿಂಗಾಯತ ಕೋಟೆ ರಚಿಸಲು ಅವಕಾಶ ಕೊಟ್ಟಿಲ್ಲ. ಇಲ್ಲಿ ಕೂಡ ಲಿಂಗಾಯತರಿಗೆ ಮಣೆ ಹಾಕಿದರೆ, ಒಕ್ಕಲಿಗ ಸೇರಿದಂತೆ ಇನ್ನಿತರ ಸಮುದಾಯದ ವಿರೋಧ ವ್ಯಕ್ತವಾಗಬಹುದ ಎನ್ನುವ ಭಯದಿಂದ ಬೆಂಗಳೂರಿನಲ್ಲಿನ ಲಿಂಗಾಯತ ಜೇನುಗೂಡಿಗೆ ಕೈ ಹಾಕುವ ಸಾಹಸಕ್ಕೆ ಯಾವ ಪಕ್ಷವೂ ಹೋಗಿಲ್ಲ. ಅಂದರೆ, ಇಲ್ಲಿ ಅರ್ಥ ಮಾಡಿಕೊಳ್ಳುವುದು ಇಷ್ಟೇ. ಮೊದಲೇ ಹೇಳಿದಂತೆ ಯಾವ ಕ್ಷೇತ್ರದಲ್ಲಿ ಯಾವ ಬೀಜ ಬಿತ್ತಬೇಕು ಎನ್ನುವುದು ನಾಯಕರಿಗೆ ಚೆನ್ನಾಗಿ ಗೊತ್ತು!!

ಚುನಾವಣೆ ಪೂರ್ವ ಹಾಗೂ ಸದ್ಯದ ಅಬ್ಬರದ ಪ್ರಚಾರದ ಮಧ್ಯೆ ಲಿಂಗಾಯತ… ಲಿಂಗಾಯತ…ಎಂದೇ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಲಿಂಗಾಯತರ ರಾಜಕೀಯದ ನಿರ್ಣಾಯಕರು ಎಂದೇ ತೋರಿಸಲಾಗುತ್ತಿದೆ. ಆದರೂ ಇವರ ಒಳ ತಂತ್ರಗಳು ಮಾತ್ರ ಭಯಾನಕ ಹಾಗೂ ಬೆಚ್ಚಿ ಬೀಳಿಸುವಂತಿವೆ. ಈಗಾಗಲೇ ಎಲ್ಲ ಕ್ಷೇತ್ರಗಳಲ್ಲಿಯೂ ಭರ್ಜರಿ ಪ್ರಚಾರ ನಡೆಸುತ್ತಿವೆ. ಯಾವ ಕ್ಷೇತ್ರದಲ್ಲಿ ಯಾವ ಸಮುದಾಯದವರು ನಿರ್ಣಾಯಕ, ಪ್ರಾಭಲ್ಯ ಇದ್ದಾರೆ ಎಂಬುವುದನ್ನು ಅಳೆದು – ತೂಗಿ ಲೆಕ್ಕಾಹಾಕಿ ಆಯಾ ಸಮುದಾಯದವರಿಗೆ ಮಣೆ ಹಾಕುವ ಪ್ರಯತ್ನ ಮಾಡಲಾಗಿದೆ. ಬಿಜೆಪಿಯಂತೂ ಮುಸ್ಲಿಂ, ಕ್ರಿಶ್ಚಿಯನ್ನರನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಮಹಿಳೆಯರಿಗೆ ಕೂಡ ಮೂರು ಪಕ್ಷಗಳಲ್ಲಿ ಸಿಕ್ಕಿದ್ದು 11, 12, 13 ಕ್ಷೇತ್ರಗಳು. ಮೀಸಲು ಕ್ಷೇತ್ರ ಎಂಬ ಸಂವಿಧಾನ ಇರುವುದರಿಂದಲೋ ಏನೋ ಎಸ್ಸಿ-ಎಸ್ಟಿ ಸಮುದಾಯಗಳು ಟಿಕೆಟ್ ಪಡೆದಿವೆ. ಇಲ್ಲವಾದರೆ, ಅವರನ್ನು ಕೂಡ ಚುನಾವಣೆಯಿಂದ ಹೊರಗೆ ಇಡುತ್ತಿದ್ದರೋ ಏನೋ? ಏನೇ ಇರಲಿ. ಇದೇ ಪಕ್ಷಗಳ ಜಾತಿಯ ರಾಜಕಾರಣ! ಇದೇ ಅವರ ಅಜೆಂಡಾ! ಇದೇ ಅವರ ಸಿದ್ಧಾಂತ! ಎಲ್ಲಿ ಯಾರನ್ನು ಹೇಗೆ ಪಳಗಿಸಬೇಕೋ ಹಾಗೆ ಪಳಗಿಸುತ್ತಾರೆ.
ಇನ್ನೂ ಯಾವ ಯಾವ ಸಮುದಾಯದವರಿಗೆ ಯಾವ ಪಕ್ಷ ಎಷ್ಟು ಟಿಕೆಟ್ ನೀಡಿದೆ ಎಂಬುವುದನ್ನು ಗಮನಿಸಿದರೆ,
2023-ಜಾತಿವಾರು ಅಭ್ಯರ್ಥಿಗಳು ಅಖಾಡದಲ್ಲಿ
ಜಾತಿ ಲೆಕ್ಕಾಚಾರ BJP CONG JDS
ಲಿಂಗಾಯತ 67 51 44
ಒಕ್ಕಲಿಗ 42 43 54
SC 37 35 34
ST 17 16 14
ಮುಸ್ಲಿಂ 00 14 23
ಬ್ರಾಹ್ಮಣ 13 07 02
ಕುರುಬ 07 14 10
ಜೈನ 01 01 01
ಕ್ರಿಶ್ಚಿಯನ್ 00 03 01
OBC 40 40 28
ಮಹಿಳೆ 11 12 13

ಕ್ಷೇತ್ರಗಳವಾರು ಜಾತಿ ಲೆಕ್ಕಾಚಾರದಲ್ಲಿ ಟಿಕೆಟ್ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದರೆ, ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರಿಗೆ ಹೆಚ್ಚಿನ ಟಿಕೆಟ್ ನೀಡಲಾಗಿದೆ. ಮೀಸಲಿರುವ ಕ್ಷೇತ್ರದಲ್ಲಿ ಎಸ್ಸಿ-ಎಸ್ಟಿ ನಾಯಕರು ಟಿಕೆಟ್ ಪಡೆದಿದ್ದಾರೆ. ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ ದಕ್ಷಿಣದಲ್ಲಿ ಬರಲು ಅವಕಾಶ ನೀಡಿಲ್ಲ, ಒಕ್ಕಲಿಗರಿಗೆ ಉತ್ತರ ಕರ್ನಾಟಕದಲ್ಲಿ ಪ್ರಾಭಲ್ಯ ಮೆರೆಯಲು ಎಲ್ಲಿಯೂ ಅವಕಾಶ ನೀಡಿಲ್ಲ. ಇದೇ ರಾಜಕೀಯ ತಂತ್ರ- ಲೆಕ್ಕಾಚಾರ. ಇನ್ನಾದರೂ ಮತದಾರ ಇದನ್ನೆಲ್ಲ ಅರಿತು ಒಂದಾಗಿ ಬಾಳಬೇಕು. ಜಾತಿ-ಮತ-ಪಂಥದಿಂದ ದೂರ ಇರಬೇಕು. ಆದರೂ ಕಟ್ಟ ಕಡೆಯದಾಗಿ ಕಾಡುವ ಪ್ರಶ್ನೆ, ಬೆಂಗಳೂರಿನಲ್ಲಿ 5 ಕ್ಷೇತ್ರಗಳಲ್ಲಿ ಲಿಂಗಾಯತರು ಪ್ರಭಲ ಹಾಗೂ ನಿರ್ಣಾಯಕರಿದ್ದರೂ ಯಾವೊಂದು ಪಕ್ಷವೂ ಲಿಂಗಾಯತರಿಗೆ ಮಣೆ ಹಾಕಲು ಹೋಗಿಲ್ಲವೇಕೆ? ಇದಕ್ಕೆ ಪಕ್ಷಗಳೇ ಉತ್ತರ ನೀಡಬೇಕಿದೆ.

