Lucknow : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸೋಲನುಭವಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡಕ್ಕೆ ಈಗ ದೊಡ್ಡ ಶಾಕ್ ಎದುರಾಗಿದೆ. ತಂಡದ ಇಬ್ಬರು ಪ್ರಮುಖ ಆಟಗಾರರು ಐಪಿಎಲ್ 2023ನಿಂದಲೇ (IPL 2023) ಹೊರಗುಳಿದಿದ್ದಾರೆ.
ಇಲ್ಲಿಯವರೆಗೆ 9 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು 5ರಲ್ಲಿ ಗೆಲುವು ಸಾಧಿಸಿದ್ದು, 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಹೀಗಾಗಿ ಸದ್ಯ ಪಾಂಯಿಂಟ್ಸ್ ಪಟ್ಟಿಯಲ್ಲಿ 3 ಸ್ಥಾನದಲ್ಲಿರುವ ಲಕ್ನೋ ಪ್ಲೇ ಆಫ್ ತಲುಪಲು ಉಳಿದ 5 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಬೇಕಿದೆ. ಈ ನಡುವೆ ನಾಯಕ ಕೆ.ಎಲ್ ರಾಹುಲ್ (KL Rahul) ಹಾಗೂ ಜಯದೇವ್ ಉನಾದ್ಕಟ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟೂರ್ನಿಯಿಂದ ಹೊರಗುಳಿದಿದ್ದು, ತಂಡಕ್ಕೆ ದೊಡ್ಡ ನಿರಾಸೆ ಮೂಡಿಸಿದೆ.
ಬೆಂಗಳೂರು ತಂಡದ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯುವ ಪ್ರಯತ್ನದಲ್ಲಿ ಕೆ.ಎಲ್ ರಾಹುಲ್ ಬೌಂಡರಿ ತಡೆಯಲು ಮುಂದಾದಾಗ ನೆಲಕ್ಕೆ ಉರುಳಿ ಬಿದ್ದಿದ್ದರು. ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ನೋವು ತಾಳಲಾರದೆ ಅವರು, ತಮ್ಮ ತಂಡದ ಸಹಾಯಕ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದಿದ್ದರು. ನಂತರ ಅವರು ಮರಳಲೇ ಇಲ್ಲ. 19ನೇ ಓವರ್ನಲ್ಲಿ ಇನ್ನೂ ಮೂರು ಎಸೆತಗಳು ಬಾಕಿಯಿದ್ದಾಗ ಮತ್ತೆ ನೋವಿನಲ್ಲೂ ಕಣಕ್ಕಿಳಿದಿದ್ದರು. ಮೂರು ಎಸೆತಗಳನ್ನ ಎದುರಿಸಿದರೂ ಯಾವುದೇ ರನ್ ಕದಿಯಲು ಆಗಲಿಲ್ಲ. ಗಾಯಕ್ಕೆ ತುತ್ತಾಗಿರುವ ಕೆ.ಎಲ್ ರಾಹುಲ್ ಅವರನ್ನು ಲಕ್ನೋ ಫ್ರಾಂಚೈಸಿಯಿಂದ ಬಿಸಿಸಿಐ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ರಾಹುಲ್ ಅವರ ಗಾಯದ ಭಾಗವನ್ನು ಸ್ಕ್ಯಾನ್ಗೆ ಒಳಪಡಿಸಲಾಗಿದ್ದು, ಅವರಿಗೆ ನೋವು ಇನ್ನೂ ಕಡಿಮೆಯಾಗಿಲ್ಲ.