New Delhi : ಈಗಾಗಲೇ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡುತ್ತಾರೆ. ಅದೇ ರೀತಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ಈ ನಿಯಮ ಜಾರಿಗೆ ತರುವ ಕಾರ್ಯ ನಡೆಯುತ್ತಿದೆ.

ಶನಿವಾರ ಮತ್ತು ಭಾನುವಾರ ಸರ್ಕಾರಿ ಬ್ಯಾಂಕುಗಳು ಬಾಗಿಲು ಮುಚ್ಚಲಿವೆ ಎನ್ನಲಾಗುತ್ತಿದ್ದು, ಈ ಕುರಿತು ಭಾರತೀಯ ಬ್ಯಾಂಕುಗಳ ಸಂಸ್ಥೆ (IBA- Indian Banks Association) ಮಾಡಿರುವ ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯದಿಂದ ಅನುಮೋದನೆಯಷ್ಟೇ ಬಾಕಿ ಇದೆ ಎನ್ನಲಾಗಿದೆ. ಬ್ಯಾಂಕುಗಳು ಈಗ ಪ್ರತೀ ಭಾನುವಾರ ಹಾಗೂ 2ನೇ ಮತ್ತು 3ನೇ ಶನಿವಾರದಂದು ರಜೆ ಹೊಂದಿವೆ. ಈಗ ಭಾನುವಾರದ ಜೊತೆಗೆ ಎಲ್ಲಾ ಶನಿವಾರವೂ ಬ್ಯಾಂಕಿಗೆ ಆಫ್ ಇರಲಿದೆ.
ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಶನ್ (ಐಬಿಎ) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ (UFBA) ಸಂಸ್ಥೆಗಳು ಬ್ಯಾಂಕುಗಳಿಗೆ ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿವೆ. ಐದು ದಿನ ಕೆಲಸದ ವಾರಕ್ಕೆ ಅನುಮತಿ ನೀಡುವುದಾದರೆ ಬ್ಯಾಂಕುಗಳ ದಿನದ ಅವಧಿ 40 ನಿಮಿಷ ಹೆಚ್ಚು ಮಾಡಬೇಕು. ಅಂದರೆ, ಬ್ಯಾಂಕ್ ನೌಕರರು ಕೆಲಸ ಮಾಡುವ ದಿನದಲ್ಲಿ 40 ನಿಮಿಷ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗುತ್ತದೆ.
ಬ್ಯಾಂಕುಗಳಿಗೆ ವಾರದಲ್ಲಿ ಎರಡು ದಿನ ರಜೆ ಬೇಕೆನ್ನುವ ಬೇಡಿಕೆ ಹಲವು ದಿನಗಳಿಂದಲೂ ಇದೆ. ಈ ಬೇಡಿಕೆ ಹಿನ್ನೆಲೆಯಲ್ಲಿ ಪ್ರತೀ ಎರಡು ಶನಿವಾರಕ್ಕೆ ರಜೆ ನೀಡಲಾಗಿದೆ. ಸದ್ಯ ಎಲ್ಲ ಶನಿವಾರವೂ ರಜೆ ಬೇಕು ಎಂದು ಬೇಡಿಕೆ ಈಡಲಾಗಿದೆ.