ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಕ್ಷವು ಭರ್ಜರಿ ಜಯ ಸಾಧಿಸಿದೆ. ಕರ್ನಾಟಕದ ಜನರು ಸಂಪೂರ್ಣವಾಗಿ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಜೋಡೆತ್ತುಗಳ ಎದುರು, ಬಿಜೆಪಿ, ಜೆಡಿಎಸ್ ಮಕಾಡೆ ಮಲಗಿವೆ. ಹೀಗಾಗಿ ಸದ್ಯ ಕಾಂಗ್ರೆಸ್ ನಲ್ಲಿ ಸಿಎಂ ಗಾದೆಯ ಗುದ್ದಾಟ ನಡೆಯುತ್ತಿದೆ.
ಸಿದ್ದು ಹಾಗೂ ಡಿಕೆಶಿ ಮಧ್ಯೆ ಸಿಎಂ ಕುರ್ಚಿಗಾಗಿ ಕಿತ್ತಾಟ ಇದ್ದರೂ, ಚುನಾವಣೆ ಸಂದರ್ಭದಲ್ಲಿ ಇಬ್ಬರು ಒಂದಾಗಿಯೇ ಜೋಡೆತ್ತಿನ ರೀತಿಯಲ್ಲಿಯೇ ಇದ್ದರು. ಹೀಗಾಗಿಯೇ ಇದು ಮತದಾರರ ಮೇಲೆ ಯಾವುದೇ ಪರಿಣಾಮ ಬೀರದೆ, ಕಾಂಗ್ರೆಸ್ ಗೆಲುವು ಸಾಧಿಸುವಂತಾಯಿತು. 224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆಯುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.. ಬಿಜೆಪಿ 66 ಸ್ಥಾನ ಮಾತ್ರಗಳಿಸಿದೆ. ಜೆಡಿಎಸ್ ನಿರೀಕ್ಷೆಗೂ ಮೀರಿ ಸೋತು ಹೋಗಿದ್ದು, ಕೇವಲ 19 ಸ್ಥಾನಗಳನ್ನು ಮಾತ್ರ ಗಳಿಸಿದೆ. ನಾಲ್ಕು ಸ್ಥಾನಗಳು ಇತರರ ಪಾಲಾಗಿವೆ. ಸರ್ಕಾರ ರಚಿಸಲು ಇದ್ದ ಮ್ಯಾಜಿಕ್ ನಂಬರ್ 113ನ್ನು ಮೀರಿ ಕಾಂಗ್ರೆಸ್ ಸ್ಥಾನಗಳನ್ನು ಗೆದ್ದುಕೊಂಡಿದೆ. ಹೀಗಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಸ್ಥಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಗಳಾಗಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ. ಸದ್ಯದ ಮಾಹಿತಿಯಂತೆ 50:50 ಆಧಾರದ ಮೇಲೆ ಹಂಚುವ ಫಾರ್ಮುಲಾದ ಬಗ್ಗೆ ಕೂಡ ಚರ್ಚೆಯಾಗುತ್ತಿದೆ. ಮೊದಲು ಸಿದ್ದರಾಮಯ್ಯ ಸಿಎಂ ಆದರೆ, ಡಿಕೆಶಿಗೆ ನಂತರ ಮೂವು ವರ್ಷ ನೀಡುವ ಕುರಿತು ಕೂಡ ಚರ್ಚೆಯಾಗಬಹುದು. ಡಿಕೆ ಶಿವಕುಮಾರ್ಗೆ ಸಿಎಂ ಹುದ್ದೆ ನೀಡಿದರೆ ಅವರ ಜೊತೆಗೆ ಮೂವರು ಡಿಸಿಎಂಗಳುನ್ನು ಮಾಡುವ ಪ್ಲಾನ್ ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.
ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಿಂದುಳಿದ ವರ್ಗದ ಒಬ್ಬರು, ದಲಿತ ಸಮುದಾಯದ ಒಬ್ಬರು, ಲಿಂಗಾಯತ ಸಮುದಾಯದ ಒಬ್ಬರು ಡಿಸಿಎಂ ಮಾಡುವ ಸಾಧ್ಯತೆ ಕೂಡ ಇದೆ. ಅಲ್ಲದೇ, ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ, ಡಿಕೆಶಿಯನ್ನು ಡಿಸಿಎಂ ಮಾಡಲೂಬಹುದು. ಆದರೆ, ಹೈಕಮಾಂಡ್ ಅಂಗಳದಲ್ಲಿ ಸಿಎಂ ರೇಸ್ ನಲ್ಲಿ ಸಿದ್ದರಾಮಯ್ಯ ಅವರೇ ಮುಂಚೂಣಿಯಲ್ಲಿದ್ದಾರೆ ಎನ್ನಲಾಗುತ್ತಿದೆ. 75ರ ಹರೆಯದ ಸಿದ್ದರಾಮಯ್ಯನವರು ಇದು ತಮ್ಮ ಕೊನೆಯ ಚುನಾವಣಾ ಕದನ ಎಂದು ಘೋಷಿಸಿದ್ದಾರೆ. ಹೀಗಾಗಿ ಇವರಿಗೆ ಸಿಎಂ ಹುದ್ದೆ ನೀಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನುವುದು ಹೈಕಮಾಂಡ್ನ ಲೆಕ್ಕಾಚಾರವಾಗಿದೆ. 60ರ ಹರೆಯದ ಡಿಕೆ ಶಿವಕುಮಾರ್ ಅವರು ಬಿಜೆಪಿಯ ಕಂದಾಯ ಸಚಿವ ಆರ್.ಅಶೋಕ ಅವರನ್ನು ನಿರಾಯಾಸವಾಗಿ ಸೋಲಿಸುವ ಮೂಲಕ ತಮ್ಮ ಭದ್ರಕೋಟೆ-ಕನಕಪುರವನ್ನು ಉಳಿಸಿಕೊಂಡಿದ್ದಾರೆ. ಇಂದು ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎನ್ನುವ ಕುರಿತು ಅಂತಿಮ ನಿರ್ಧಾರವಾಗುವ ಸಾಧ್ಯತೆ ಇದೆ.