Pune : ಬೇಸಿಗೆ ಇದೆ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಹೊರಗೆ ಮಲಗಿದ್ದು, ಶಾಕ್ ಎದುರಾಗಿದೆ. ವ್ಯಕ್ತಿಯೊಬ್ಬ ತಾನು ಕೆಲಸ ಮಾಡುವ ಸ್ಥಳದ ಹೊರಗೆ ಮಲಗಿದ್ದ ಸಂದರ್ಭದಲ್ಲಿ ಚಿರತೆಯೊಂದು ಬಂದು ಆತನ ಸಾಕು ನಾಯಿ ಹೊತ್ತೊಯ್ದಿದೆ. ಆದರೆ, ವ್ಯಕ್ತಿ ಜಸ್ಟ್ ಮಿಸ್ ಆಗಿದ್ದಾನೆ.
ಮಹಾರಾಷ್ಟ್ರದ ಪುಣೆಯ ಅಲೆಫಟಾ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಲ್ಯಾಣ ನಗರದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ವೀಡಿಯೋದಲ್ಲಿ ಗ್ಯಾರೇಜ್‌ನಂತೆ ಕಾಣಿಸುತ್ತಿದ್ದು, ಬಹುಶಃ ಅಲ್ಲೇ ಕೆಲಸ ಮಾಡುವ ವ್ಯಕ್ತಿ ಎನ್ನಲಾಗಿದೆ. ಲಾರಿಗಳ ಮುಂದೆ ಬೆಂಚೊಂದನ್ನು ಜೋಡಿಸಿ ಅದರ ಮೇಲೆ ಮಲಗಿದ್ದಾನೆ. ಆತನ ಪಕ್ಕದಲ್ಲಿ ನಾಯೊಂದು ಕೆಳಗೆ ಮಲಗಿದೆ.
ಮಧ್ಯರಾತ್ರಿ ವೇಳೆ ಇಲ್ಲಿಗೆ ಚಿರತೆಯೊಂದು ಬಂದಿದ್ದು, ಸ್ವಲ್ಪ ಕಾಲ ಸಂದರ್ಭವನ್ನು ಅವಲೋಕಿಸಿದ ಚಿರತೆ ಸ್ವಲ್ಪ ಮುಂದೆ ಬಂದು ನಾಯಿಯನ್ನು ಎಳೆದುಕೊಂಡು ಅಲ್ಲಿಂದ ಕ್ಷಣದಲ್ಲಿ ಮರೆಯಾಗಿದೆ. ಈ ಸಂದರ್ಭದಲ್ಲಿ ನಾಯಿ ಜೋರಾಗಿ ಬೊಬ್ಬೆ ಹಾಕಿದ್ದು, ಈ ಸದ್ದು ಕೇಳಿ ಎದ್ದ ಮಾಲೀಕನಿಗೆ ಏನಾಗುತ್ತಿದೆ ಎಂಬುವುದೇ ತಿಳಿಯದಾಗಿದೆ.
ನಿದ್ದೆ ಮಂಪರಿನಲ್ಲಿದ್ದ ಆತ ಸಂಪೂರ್ಣವಾಗಿ ವಾಸ್ತವಕ್ಕೆ ಬರುವ ವೇಳೆ ಚಿರತೆ ಆತನ ಶ್ವಾನ ಎತ್ತಿಕೊಂಡು ಹೋಗಿದೆ. ಅದೃಷ್ಟವಶಾತ್ ಚಿರತೆ ನಾಯಿಯನ್ನು ಬಿಟ್ಟು ಆತನ ಮೇಲೆ ದಾಳಿ ಮಾಡಿಲ್ಲ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ವೈರಲ್ ಆಗಿದ್ದು, ವೀಡಿಯೋ ನೋಡಿದ ಅನೇಕರು ದಿಗ್ಭ್ರಾಂತರಾಗಿದ್ದಾರೆ.