Bangalore : ಸಿದ್ದರಾಮಯ್ಯ ಅವರು ಸಿಎಂ ಹಾಗೂ ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಎಂದು ಖುದ್ದು ಎಐಸಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ. ಹೀಗಾಗಿ ಕುರ್ಚಿಯ ಗದ್ದಲಕ್ಕೆ ಅಂತ್ಯ ಸಿಕ್ಕಿತ್ತು. ಆದರೆ, ಸಚಿವ ಸಂಪುಟ ರಚನೆ ಎಂಬುವುದು ಕಬ್ಬಿಣದ ಕಡಲೆಯಾಗಿ ಕಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಹಿರಿಯ ನಾಯಕರು ಗೆಲುವು ಸಾಧಿಸಿದ್ದಾರೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಸೇರ್ಪಡೆಯಾದ ನಂತರ ಅವರನ್ನು ನಿಭಾಯಿಸುವುದು ಹೊಸ ಮುಖ್ಯಮಂತ್ರಿಗೆ ದೊಡ್ಡ ಸವಾಲಾಗಲಿದೆ. ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜಗಳಲ್ಲೂ ಅತ್ಯಂತ ಪ್ರಭಾವಶಾಲಿಗಳೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಸಿಎಲ್ಪಿ ನಾಯಕ ಆಯ್ಕೆ ಪ್ರಕ್ರಿಯೆ ನಾಮಪಕಾವಸ್ಥೆ ನಡೆಯಲಿದೆ. ನಂತರ ಸಿಎಲ್ ಪಿ ನಾಯಕನ ಆಯ್ಕೆ ಕುರಿತು ರಾಜ್ಯಪಾಲರಿಗೆ ಎಐಸಿಸಿಯ ಪತ್ರ ನೀಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮತ್ತೆ ನವದೆಹಲಿಗೆ ತೆರಳಲಿದ್ದಾರೆ.
ಸಚಿವ ಸಂಪುಟ ರಚನೆ ಆಯ್ಕೆ ಕಸರತ್ತು ನಡೆದಿದೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಬೆಂಬಲಿಗರು ತಮಗೆ ಸಚಿವ ಸ್ಥಾನ ಬೇಕೆಂದು ಪೈಪೋಟಿಗಿಳಿದಿದ್ದಾರೆ. ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಿಎಂ ಆಯ್ಕೆ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಹೈಕಮಾಂಡ್ಗೆ ಸಂಪುಟ ರಚನೆ ಸವಾಲು ಎದುರಾಗಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಕುಳಿತು ಮಾತುಕತೆಗಳ ಮೂಲಕ ಬಗೆಹರಿಸಲು ನಾಳೆ(ಮೇ 19) ಮತ್ತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದೆಹಲಿ ತೆರಳಲಿದ್ದು, ವೇಳೆ ಪದಗ್ರಹಣ ಸಮಾರಂಭಕ್ಕೆ ಹೈಕಮಾಂಡ್ ನಾಯಕರಿಗೆ ಆಹ್ವಾನ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ-ತಮ್ಮ ಬೆಂಗಲಿಗರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು? ಯಾರಿಗೆ ಯಾವ ಖಾತೆ? ಎನ್ನುವ ಬಗ್ಗೆ ಹೈಕಮಾಂಡ್ ನಾಯಕ ಸಮ್ಮುಖದಲ್ಲಿ ಚರ್ಚೆ ನಡೆಸಲಿದ್ದಾರೆ.