ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಎಂ. ಖರ್ಗೆ (Priyank Kharge) ತಂದೆಯಂತೆಯೇ ಹೋರಾಟಗಾರ. ಬಿಜೆಪಿ ವಿರುದ್ಧ ಸದಾ ಕಾಲ ಸಮರ ಸಾರುತ್ತಿದ್ದ ನಾಯಕನಿಗೆ ಸದ್ಯ ಸಚಿವ ಸ್ಥಾನ ಲಭಿಸಿದೆ.
1978 ನವೆಂಬರ್ 22 ರಂದು ಜನಿಸಿ ಪ್ರಿಯಾಂಕ್, ಬಿಎ ಪದವೀಧರರಾಗಿ ಡಿಪ್ಲೋಮಾ ಇನ್ ಗ್ರಾಫಿಕ್ಸ್ ಮತ್ತು ಎನಿಮೇಷನ್ ವ್ಯಾಸಂಗ ಮಾಡಿದ್ದಾರೆ. ದೇಶ ಹಾಗೂ ವಿದೇಶ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದಾರೆ. ಕಲಬುರಗಿಯಲ್ಲಿ ನೆಲೆಸಿರುವ ಇವರು, ಹಿಂದೆ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದು, ಇದೀಗ ಮೂರನೇ ಬಾರಿಗೆ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿಯೇ ಎನ್ಎಸ್ಯುಐ ಸೇರಿದ್ದ ಪ್ರಿಯಾಂಕ್ ಖರ್ಗೆ, ಬಳಿಕ ರಾಜಕೀಯಕ್ಕೆ ಬಂದರು. ಬಳಿಕ 2007 ರಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿಯೂ ನೇಮಕಗೊಂಡರು. 2009 ರ ಕರ್ನಾಟಕ ಅಸೆಂಬ್ಲಿ ಉಪಚುನಾವಣೆಯಲ್ಲಿ ಚಿತ್ತಾಪುರದಿಂದ ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕೀಯವನ್ನು ಪ್ರವೇಶಿಸಿದರು. ಆದರೆ, ಸ್ಫರ್ಧಿಸಿದ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದ ವಾಲ್ಮೀಕಿ ನಾಯಕ್ ಎದುರ ಸೋತರು. 2013 ರಲ್ಲಿ ಅವರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರು, ಮತ್ತು 2016 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಐಟಿ ಮತ್ತು ಬಿಟಿ ಹಾಗೂ ಪ್ರವಾಸೋದ್ಯಮ ಸಚಿವರಾದರು. 38 ನೇ ವರ್ಷ ವಯಸ್ಸಿನಲ್ಲಿಯೇ ಸಚಿವರಾಗಿದ್ದರು. 2018 ರಲ್ಲಿ ಮತ್ತೆ ಚಿತ್ತಾಪುರದಿಂದ ಗೆದ್ದರು ಮತ್ತು ಎಚ್ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. 2023 ರಲ್ಲಿ ಚಿತ್ತಾಪುರ ಕ್ಷೇತ್ರದಿಂದ ಮೂರನೆಯ ಬಾರಿ ಗೆಲುವು ಸಾಧಿಸಿ, ಮತ್ತೆ ಸಚಿವರಾಗುತ್ತಿದ್ದಾರೆ.
ಚಿತ್ತಾಪುರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಜನತೆ ಮನ್ನಣೆ ನೀಡಿದೆ. ಶೈಕ್ಷಣಿಕ ಅಭಿವೃದ್ದಿ, ಮೂಲಭೂತ ಸೌಲಭ್ಯಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಹಾಗೂ ಕುಡಿಯುವ ನೀರಿಗೆ ಆದ್ಯತೆ, ಆರೋಗ್ಯ ಕ್ಷೇತ್ರದ ಅಮೂಲಾಗ್ರ ಬಲಾವಣೆ ಹಾಗೂ ಮಳೆಯಾಧಾರಿತ ಜಮೀನುಗಳಿಗೆ ನೀರಾವರಿ ಒದಗಿಸಿರುವುದು. ಬಿಜೆಪಿಯ ಘಟಾನುಘಟಿ ನಾಯಕರ ಪ್ರಚಾರದ ನಡುವೆಯೂ ಪ್ರಿಯಾಂಕ್ ಅವರ ಜನಪರ, ಜೀವಪರ ಹಾಗೂ ಜಾತ್ಯಾತೀತ ನಿಲುವುಗಳಿಂದಾಗಿ ಜಯ ಸಾಧಿಸಿದ್ದಾರೆ.