ಬೆಂಗಳೂರು ತಂಡದ ಕಪ್ ಗೆಲ್ಲುವ ಕನಸು ಮತ್ತೆ ಕನಸಾಗಿಯೇ ಉಳಿದಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿಯೂ ಆರ್ ಸಿಬಿ ಪ್ಲೇ ಆಫ್ ಪ್ರವೇಶಿಸದೆ ಟೂರ್ನಿಯಿಂದ ಹೊರಬಿದ್ದಿದೆ.
ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡುಪ್ಲೆಸಿಸ್ (RCB vs GT) ಪಡೆ ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ತೋರಿ, ಸೋಲು ಕಂಡಿತು. ಆರ್ಸಿಬಿ ಸೋಲುತ್ತಿದ್ದಂತೆ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಆಟಗಾರರು ಕೂಡ ಬೇಸರಗೊಂಡರು. ಆರ್ಸಿಬಿ ಪ್ಲೇಯರ್ಸ್ ಮೈದಾನದಲ್ಲೇ ತಮ್ಮ ಭಾವನೆ ವ್ಯಕ್ತಪಡಿಸಿ ಭಾವುಕರಾದರು. ಮೊಹಮ್ಮದ್ ಸಿರಾಜ್ (Mohammed Siraj) ಹಾಗೂ ವಿರಾಟ್ ಕೊಹ್ಲಿಯ (Virat Kohli) ಅವರ ವಿಡಿಯೋ ವೈರಲ್ ಆಗುತ್ತಿದೆ.
20ನೇ ಓವರ್ನ ಮೊದಲ ಎಸೆತದಲ್ಲಿ ಶುಭ್ಮನ್ ಗಿಲ್ ಸಿಕ್ಸ್ ಸಿಡಿಸುತ್ತಿದ್ದಂತೆ ಆರ್ಸಿಬಿ ಸೋಲು ಕಂಡಿತು. ಕೋಪಗೊಂಡ ವಿರಾಟ್ ಕೊಹ್ಲಿ ತಮ್ಮ ಕೈಯಲ್ಲಿದ್ದ ನೀರಿನ ಬಾಟಲ್ ಅನ್ನು ಮೈದಾನಕ್ಕೆ ಎಸೆದಿದ್ದಾರೆ. ಅತ್ತ ಮೊಹಮ್ಮದ್ ಸಿರಾಜ್ ಬೇಸರದಿಂದ ಮೈದಾನದಲ್ಲಿ ಮಲಗಿದರು. ಬಳಿಕ ಕಣ್ಣೀರಿಡುತ್ತಿರುವುದು ಕಂಡು ಬಂದಿತು. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ಮುಗಿದ ಬಳಿಕ ಆರ್ಸಿಬಿಯ ಎಲ್ಲ ಪ್ಲೇಯರ್ಸ್ ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.