ಕ್ರೈಸ್ತರ ಗ್ರಂಥವಾಗಿರುವ ಬೈಬಲ್ (Bible) ಹೊಂದಿರುವ ಕಾರಣಕ್ಕೆ 2 ವರ್ಷದ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಘಟನೆ ಉತ್ತರ ಕೊರಿಯಾದಲ್ಲಿ (North Korea) ನಡೆದಿದೆ.
ಮಗು ಬೈಬಲ್‌ನೊಂದಿಗೆ ಸಿಕ್ಕಿಬಿದ್ದ ಉತ್ತರ ಕೊರಿಯಾದ ಕ್ರಿಶ್ಚಿಯನ್ನರು ಈಗ ಅಲ್ಲಿ ಮರಣದಂಡನೆಯ ಶಿಕ್ಷೆ ಎದುರಿಸುತ್ತಿದ್ದಾರೆ. ಮಕ್ಕಳು ಸೇರಿದಂತೆ ಅವರ ಕುಟುಂಬಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವರದಿಯು ಬಹಿರಂಗಪಡಿಸಿದೆ.
ಉತ್ತರ ಕೊರಿಯಾದಲ್ಲಿ 70,000 ಕ್ರಿಶ್ಚಿಯನ್ನರನ್ನು (ಇತರೆ ಧರ್ಮಗಳನ್ನು ಅನುಸರಿಸುವ ಜನರು ಸೇರಿದಂತೆ) ಬಂಧಿಸಲಾಗಿದೆ ಎಂದು ಅಂದಾಜಿಸಿದೆ. ಸೆರೆಮನೆಗೆ ಕಳುಹಿಸಲಾದ ಅನೇಕರಲ್ಲಿ ಎರಡು ವರ್ಷದ ಮಗುವೂ ಸೇರಿದೆ ಎಂದು ವರದಿ ತಿಳಿಸಿದೆ.
ಕ್ರೈಸ್ತ ಧರ್ಮ ಆಚರಣೆ ಮತ್ತು ಬೈಬಲ್ ಹೊಂದಿದ್ದಕ್ಕಾಗಿ ಕುಟುಂಬವನ್ನು ಬಂಧಿಸಲಾಗಿದೆ. ಮಗು ಸೇರಿದಂತೆ ಇಡೀ ಕುಟುಂಬಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಬಂಧನಕ್ಕೊಳಗಾಗಿರುವ ಕ್ರಿಸ್ಚಿಯನ್ನರು ಭೀಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ದೈಹಿಕ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
2021 ರಲ್ಲಿ, ಕೊರಿಯಾ ಫ್ಯೂಚರ್ ಸಂಸ್ಥೆಯು ಉತ್ತರ ಕೊರಿಯಾದಲ್ಲಿ ಧಾರ್ಮಿಕ ಆಚರಣೆ ಕಾರಣಕ್ಕಾಗಿ ಮಹಿಳೆಯರ ವಿರುದ್ಧ ನಡೆದಿರುವ ಚಿತ್ರಹಿಂಸೆ ಕುರಿತು ವರದಿಯನ್ನು ಬಿಡುಗಡೆ ಮಾಡಿತು. ದೌರ್ಜನ್ಯವನ್ನು ಅನುಭವಿಸಿದ 151 ಕ್ರಿಶ್ಚಿಯನ್ ಮಹಿಳೆಯರನ್ನು ಸಂದರ್ಶನಕ್ಕೆ ಒಳಪಡಿಸಿ ವರದಿ ಮಾಡಲಾಗಿತ್ತು. ಬಂಧನ, ಚಿತ್ರಹಿಂಸೆ, ಗಡಿಪಾರು, ಬಲವಂತದ ದುಡಿಮೆ ಮತ್ತು ಲೈಂಗಿಕ ಹಿಂಸೆ ನಡೆದಿರುವ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.