ಸ್ನೇಹ ಎನ್ನುವುದು ಎಲ್ಲಕ್ಕಿಂತ ಮಿಗಿಲಾದುದು, ಒಮ್ಮೊಮ್ಮೆ ಅದು ಸಂಬಂಧಿಗಳಿಗಿಂತಲೂ ಮಿಗಿಲು ಎನ್ನುತ್ತಾರೆ. ಕಷ್ಟಕ್ಕೆ ಆಗುವ ಇನ್ನೊಂದು ಸಂಬಂಧವೇ ಸ್ನೇಹ ಎನ್ನುತ್ತಾರೆ. ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದೆ.
ವ್ಯಕ್ತಿಯೊಬ್ಬ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿದ್ದರು. ಯಮುನಾ ನದಿಯ ತಟದಲ್ಲಿ ಅಂತ್ಯಕ್ರಿಯೆ ನೆರವೇರುತ್ತಿತ್ತು. ಆ ಸಂದರ್ಭದಲ್ಲಿ ದುಃಖ ತಾಳಲಾರದೆ ಅವರ ಸ್ನೇಹಿತ ಕೂಡ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಶೋಕ್(42) ಕ್ಯಾನ್ಸರ್ನಿಂದಾಗಿ ಶನಿವಾರ ಸಾವನ್ನಪ್ಪಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗ್ಗೆ 11 ಗಂಟೆಯ ಸಮಯದಲ್ಲಿ ಯಮುನಾ ನದಿ ಬಳಿ ಅಂತ್ಯಕ್ರಿಯೆ ನೆರವೇರುತ್ತಿತ್ತು.
ಮೃತನ ಸ್ನೇಹಿತ ಆನಂದ್(40) ಆಗಮಿಸಿದ್ದರು, ಜನರು ಅಂತ್ಯಕ್ರಿಯೆ ಮಾಡಿದ ಜಾಗದಿಂದ ಹೋಗುತ್ತಿರುವಾಗ ಆತ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಅವರನ್ನು ಆಗ್ರಾ ಮೆಡಿಕಲ್ ಕಾಲೇಜಿಗೆ ಸಾಗಿಸಲಾಯಿತು. ಆದರೆ, ತೀವ್ರವಾಗಿ ಸುಟ್ಟಿದ್ದರಿಂದಾಗಿ ಆತ ಬದುಕುಳಿಯಲಿಲ್ಲ ಎನ್ನಲಾಗಿದೆ.