ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ವಿರುದ್ಧ ತೀವ್ರ ಮುಖಭಂಗ ಅನುಭವಿಸಿವೆ. ಹೀಗಾಗಿ ಲೋಕಸಭೆಯಲ್ಲಿ ಗೆಲ್ಲಲೇಬೇಕಾದ ರಣತಂತ್ರ ಹೂಡಿವೆ. ಲೋಕಸಭೆಯಲ್ಲಿ ಕಾಂಗ್ರೆಸ್ ನ್ನು ಎದುರಿಸಲು ಬಿಜೆಪಿ ಹಾಗೂ ಜೆಡಿಎಸ್ ಒಂದಾಗಲಿವೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಬಿಜೆಪಿ ಈ ಬಾರಿ ಗೆಲ್ಲಲೇಬೇಕಾದ ಹಾಗೂ ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳ ಕಡೆಗೆ ಮಾತ್ರ ಗಮನ ಹರಿಸಿದ್ದು, ಜೆಡಿಎಸ್ ಗೆಲ್ಲಲು ಸಾಧ್ಯವಿರುವ ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಡವು ತಂತ್ರ ಹೆಣೆದಿದೆ ಎನ್ನಲಾಗಿದೆ. ಬಿಜೆಪಿ 15 ರಿಂದ 18 ಕ್ಷೇತ್ರಗಳ ಕಡೆಗೆ ಹೆಚ್ಚಿನ ಗಮನ ಹರಿಸಿ, ಜೆಡಿಎಸ್ ಪ್ರಾಭಲ್ಯ ಇರುವ 5 ರಿಂದ 6 ಕ್ಷೇತ್ರಗಳಲ್ಲಿ ಅದಕ್ಕೆ ಅವಕಾಶ ನೀಡಲು ಮುಂದಾಗಿದೆ ಎನ್ನಲಾಗಿದೆ.
2019ರಲ್ಲಿ ಬಿಜೆಪಿಯು ಅತ್ಯಧಿಕ 25 ಸ್ಥಾನಗಳಲ್ಲ ಗೆಲುವು ಸಾಧಿಸಿತ್ತು. ಈ ಬಾರಿ ಅಷ್ಟೊಂದು ಸ್ಥಾನಗಳನ್ನು ಗೆಲ್ಲುವ ಅವಕಾಶ ಅದಕ್ಕಿಲ್ಲ. ಕಾಂಗ್ರೆಸ್ ನ ವಿಧಾನಸಭಾ ಗೆಲುವು ಲೋಕಸಭೆಯ ಮೇಲೆಯೂ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ 20 ರಿಂದ 22 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿ, 8 ಸ್ಥಾನಗಳನ್ನು ಜೆಡಿಎಸ್ ಗೆ ಬಿಟ್ಟು ಕೊಡಬಹುದು ಎನ್ನಲಾಗುತ್ತಿದೆ. ಈ ಮೈತ್ರಿ ಲೆಕ್ಕಾಚಾರ ಸದ್ಯ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. ಅಲ್ಲದೇ, ಈ ಬಾರಿ ಹಲವಾರು ಹಿರಿಯ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನಾಯಕರು ರಾಜಕೀಯ ಕಣದಿಂದ ನಿವೃತ್ತಿ ಪಡೆಯುವ ಸಾಧ್ಯತೆ ಇದ್ದು, ಬಿಜೆಪಿ ಅಳೆದು – ತೂಗಿ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಆದಂತೆ ವಿರೋಧ ಕಟ್ಟಿಕೊಳ್ಳದೆ ಅಭ್ಯರ್ಥಿಗಳನ್ನು ಹಾಕುವ ತಂತ್ರ ಹೆಣೆಯುತ್ತಿದೆ.