ಕನ್ನಡಿಗರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ. ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವೀಟ್ ಅವರಿಗೇ ತಿರುಗುಬಾಣವಾಗಿ ಪರಿಣಮಿಸಿದೆ. ಉತ್ತರ ಪ್ರದೇಶ, ಬಿಹಾರಕ್ಕೆ ಹೆಚ್ಚಿನ ಪಾಲು ನೀಡಿ ಕನ್ನಡಿಗರಿಗೆ ಅನ್ಯಾಯ ಮಾಡಿದ್ದಾರೆ ಎಂದು ನೆಟ್ಟಿಗರು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯಗಳಿಗೆ 1.18 ಲಕ್ಷ ಕೋಟಿ ರೂ. ತೆರಿಗೆ ಬಿಡುಗಡೆ ಮಾಡಿರುವ ಕೇಂದ್ರ, ಕರ್ನಾಟಕಕ್ಕೆ 4,314 ಕೋಟಿ ರೂ. ನೀಡಿದೆ. ಆದರೆ ದೇಶದ ತೆರಿಗೆ ಪಾಲಿನಲ್ಲಿ ಕನಿಷ್ಠ ಪಾಲನ್ನ ಹೊಂದಿರುವ ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಗೆ ಹೆಚ್ಚಿನ ಹಣ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಬಿಜೆಪಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ತೆರಿಗೆ ಪಾಲಿನಲ್ಲಿ ಉತ್ತರ ಪ್ರದೇಶಕ್ಕೆ ಅತೀ ಹೆಚ್ಚು ತೆರಿಗೆ ಹಣ ಸಿಕ್ಕಿದೆ. ಉತ್ತರ ಪ್ರದೇಶಕ್ಕೆ 21,218 ಕೋಟಿ ನೀಡಿದ್ದರೆ, ಬಿಹಾರಕ್ಕೆ 11,897 ಕೋಟಿ, ಮಧ್ಯಪ್ರದೇಶಕ್ಕೆ 9,285 ಕೋಟಿ, ಪಶ್ಚಿಮ ಬಂಗಾಳಕ್ಕೆ 8,898 ಕೋಟಿ, ಮಹಾರಾಷ್ಟ್ರಕ್ಕೆ 7,472 ಕೋಟಿ, ರಾಜಸ್ಥಾನಕ್ಕೆ 7,128 ಕೋಟಿ, ಒಡಿಶಾಗೆ 5,356 ಕೋಟಿ ರೂಪಾಯಿ ನೀಡಲಾಗಿದೆ. ಆದರೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ 4,314 ಕೋಟಿ ರೂ. ಬಿಡುಗಡೆಯಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.
ಅತಿಹೆಚ್ಚು ತೆರಿಗೆ ಕಟ್ಟಿದರೂ ಕರ್ನಾಟಕಕ್ಕೆ ಕೇವಲ 4,314 ಕೋಟಿ ರೂ. ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯದ ಪಾಲಿನ ತೆರಿಗೆ ಹಣದ ಬಗ್ಗೆ ಬಿಜೆಪಿ ಟ್ವೀಟ್ ಮಾಡಿ, ‘ಅಭಿವೃದ್ಧಿ ಕಾರ್ಯಗಳಿಗೆ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ರಾಜ್ಯಗಳಿಗೆ 1.18 ಲಕ್ಷ ಕೋಟಿ ರೂ. ಒಂದು ತಿಂಗಳ ಮುಂಗಡದೊಂದಿಗೆ ಜಿಎಸ್ಟಿ ಹಣವನ್ನು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಒಂದು ತಿಂಗಳ ಮುಂಗಡ ಸೇರಿದಂತೆ 4,314 ಕೋಟಿ ರೂ.ಗಳನ್ನು ನೀಡಿದೆ. ಅಭಿವೃದ್ಧಿಯೊಂದನ್ನೇ ಮಂತ್ರವಾಗಿಸಿಕೊಂಡಿರುವ ದಿಟ್ಟ ದೂರಗಾಮಿ ಹೆಜ್ಜೆಗಳನ್ನು ಇಟ್ಟಿರುವ ಪ್ರಧಾನಿ ಶ್ರೀ @narendramodi ಅವರಿಗೆ ಹಾಗೂ ವಿತ್ತ ಸಚಿವರಾದ @nsitharaman ಅವರಿಗೆ ಧನ್ಯವಾದಗಳು.’ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. ಈಗ ಅದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಮ್ಮ ಹಣ ನಮಗೆ ಕೊಟ್ಟಿದ್ದಾರೆ, ಅದರಲ್ಲಿಯೋ ಮೋಸ ಆಗಿದೆ. 14,000 ಕೋಟಿ ಕೊಟ್ಟ ರಾಜ್ಯಕ್ಕೆ 4000 ಕೋಟಿ ಕೊಡುವುದು ದೊಡ್ಡ ಸಾಧನೆಯೇ ಬಿಡಿ. 10,000+ ಕೋಟಿಯಷ್ಟು ಹಣ ರಾಜ್ಯಕ್ಕೆ ನಷ್ಟ ಪ್ರತಿ ತಿಂಗಳು. ಇ ಹಣವು ರಾಜ್ಯದಲ್ಲೇ ಉಳಿಯುವಂತಾಗಿದ್ದರೆ ರಾಜ್ಯವು ಸಾಲ ಮಾಡೋ ಪ್ರಮಯವೇ ಬರುತ್ತಿರಲಿಲ್ಲ. Devolution ಹೆಸರಿನಲ್ಲಿ ಬೇರೆ ರಾಜ್ಯಗಳಿಗೆ ಬಿಟ್ಟಿ ಭಾಗ್ಯ ಕೊಡೋದೇ ಆಯ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.