ಮದುವೆಯಾಗುವುದಾಗಿ ನಂಬಿಸಿ, ನಟರೊಬ್ಬರಿಗೆ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ನಟಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ದುನಿಯಾ ವಿಜಯ್ ನಟನೆಯ ಸಲಗ (Salaga) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಮತ್ತು ಕಿರುತೆರೆ ಹಾಗೂ ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದ ಬೆಂಗಳೂರಿನ ನಟಿ ಉಷಾ ಆರ್ (Usha Ravi Shankar) ಎಂಬುವವರನ್ನೇ ಪೊಲೀಸರು ಬಂಧಿಸಿದ್ದಾರೆ. ವಂಚನೆಯ (Cheating) ಆರೋಪದ ಹಿನ್ನೆಲೆಯಲ್ಲಿ ಶಿವಮೊಗ್ಗದ ಪೊಲೀಸರು ನಟಿಯನ್ನು ಬಂಧಿಸಿದ್ದು (Arrest), ವೈದ್ಯಕೀಯ ಪರೀಕ್ಷೆಗೆ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ನಟರೊಬ್ಬರನ್ನು ಮದುವೆಯಾಗುವುದಾಗಿ ಉಷಾ ನಂಬಿಸಿದ್ದರು ಎನ್ನಲಾಗಿದ್ದು, ಪ್ರೀತಿ, ಮದುವೆಯ ನಂಬಿಕೆಯಲ್ಲೇ ಆ ನಟನಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದಾರೆ. ನಂತರ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ವಂಚನೆಗೆ ಒಳಗಾಗಿದ್ದೇನೆ ಎಂಬುವುದು ನಟನಿಗೆ ಅರಿವಾಗುತ್ತಿದ್ದಂತೆ ನಟ ಕೋರ್ಟ್ ನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆ ಉಷಾಗೆ ವಾರಂಟ್ ಕೂಡ ಜಾರಿಯಾಗಿತ್ತು. ಈ ಹಿನ್ನೆಲೆ ಚಿತ್ರನಟಿಯನ್ನು (Actress) ಬಂಧಿಸಿ ಪೊಲೀಸರು ಶಿವಮೊಗ್ಗಕ್ಕೆ ಕರೆತಂದಿದ್ದಾರೆ.