ಬಿಪರ್ ಜಾಯ್ ಚಂಡಮಾರುತದಿಂದ (Cyclone Biparjoy) ಜನರು ತೊಂದರೆ ಅನುಭವಿಸುತ್ತಿದ್ದರೆ, ಬೇಸಿಗೆಯೂ ಜನರನ್ನು ಕಂಗಾಲಾಗಿದೆ.
ಬಿಹಾರದಲ್ಲಿ ಬಿಸಿಲಿಗೆ ಜನರು ಕಂಗಾಲಾಗಿದ್ದಾರೆ. ಮದ್ಯಾಹ್ವದ ವೇಳೆ ಊರೆಲ್ಲಾ ನೀರವ ಮೌನವಾಗಿರುತ್ತದೆ. ಅದರಲ್ಲೂ ಈ ಬಾರಿ ದಾಖಲೆ ಮಟ್ಟದಲ್ಲಿ ಬಿಸಿಲಿನ ತಾಪ ಕಂಡುಬಂದಿದೆ. ಬಿಸಿಲ ಬೇಗೆಗೆ ಈಗಾಗಲೇ ಹಲವು ಸಾವು ನೋವು ಸಂಭವಿಸಿದೆ. ಬಿಹಾರದಲ್ಲಿ (Bihar) ಪರಿಸ್ಥಿತಿ ಹೆಚ್ಚು ಭೀಕರವಾಗಿದೆ. ಒಂದೇ ದಿನದಲ್ಲಿ, ಕೇವಲ 2 ಗಂಟೆಗಳಲ್ಲಿ 80 ಶವಗಳು ಸ್ಮಶಾನಕ್ಕೆ ( ಬಂದಿರುವ ಘಟನೆ ಜನರನ್ನು ಆತಂಕಕ್ಕೆ ದೂಡಿದೆ.
ಬಿಹಾರದಲ್ಲಿ ಬಿಸಿ ಗಾಳಿಯಿಂದ ಜನರು ಹೆಚ್ಚಾಗಿ ಅಸ್ವಸ್ಥರಾಗುತ್ತಿದ್ದಾರೆ. ಹೀಗಾಗಿ ಬಿಹಾರದ ಬಕ್ಸರ್ ಚರಿವಾನ್‌ನಲ್ಲಿರುವ ಸ್ಮಶಾನದ ಸ್ಥಿತಿಯೂ ಶೋಚನೀಯವಾಗಿದೆ. ಸಾಮಾನ್ಯ ದಿನದಲ್ಲಿ ಮುಕ್ತಿಧಾಮದಲ್ಲಿ ಸರಾಸರಿ 30 ರಿಂದ 35 ಮೃತದೇಹಗಳನ್ನು ಸುಡಲಾಗುತ್ತದೆ. ಆದರೆ ಈ ಸಂಖ್ಯೆ ಸದ್ಯ 80ಕ್ಕಿಂತ ಹೆಚ್ಚಾಗಿದೆ. ಜಿಲ್ಲೆಯಾದ್ಯಂತ ಹಗಲಿನಲ್ಲಿ ಸಾವು-ನೋವುಗಳು ನಡೆಯುತ್ತಿವೆ. ಆದರೆ ಜನ ರಾತ್ರಿ ಸಂದರ್ಭದಲ್ಲಿ ಶವ ಸಂಸ್ಕಾರಕ್ಕೆ ಆಗಮಿಸುತ್ತಿರುವುದರಿಂದ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನಿಂದಾಗಿ ಹಗಲು ಹೊತ್ತಿನಲ್ಲಿ ಜನರು ಸ್ಮಶಾನಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಜನರು ಸಂಜೆಯ ವೇಳೆಗೆ ಶವನ್ನು ತರುತ್ತಿದ್ದಾರೆ. ಆದರೆ ಒಂದೇ ಸಮಯದಲ್ಲಿ ಹೆಚ್ಚು ಶವ ಬರುತ್ತಿರುವುದರಿಂದ ಸ್ಮಶಾನದಲ್ಲಿ ಇಡಲೂ ಸ್ಥಳವಿಲ್ಲದಂತಾಗಿದೆ. ಸ್ಮಶಾನ ಸ್ಥಳಕ್ಕೆ ಆಗಮಿಸಿದ ಧನ್ಸೋಯಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಜಾತ್‌ಪುರ ಗ್ರಾಮದ ರಿಷಿಕೇಶ್ ರಾಯ್, ಈ ಹಿಂದೆ ಹಲವು ಬಾರಿ ಸ್ಮಶಾನಕ್ಕೆ ಭೇಟಿ ನೀಡಿದ್ದೆ, ಆದರೆ ಅಂತಹ ಪರಿಸ್ಥಿತಿ ನೋಡಿರಲಿಲ್ಲ. ಎರಡು ಗಂಟೆಯೊಳಗೆ ಸುಮಾರು 80 ಮೃತದೇಹಗಳು ಘಾಟ್‌ಗೆ ಬಂದಿರುವುದನ್ನು ನೋಡಿ ಆಘಾತವಾಯಿತು ಎಂದು ಹೇಳಿದ್ದಾರೆ. ಬಕ್ಸಾರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಂದೆಡೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದ್ದರೆ, ಇನ್ನೊಂದೆಡೆ ಜನರು ಮನೆಯಿಂದ ಹೊರಗೆ ಕಾಲಿಡುವಾಗ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ತಿಳಿಸಿದೆ. ಬೇಸಿಗೆಯಲ್ಲಿ ಸಾವಿನ ಸಂಖ್ಯೆಗಳು ಹೆಚ್ಚಾಗಿದ್ದು, ಅಂತ್ಯ ಸಂಸ್ಕಾರಕ್ಕೆ ಬಂದವರು ಮೃತದೇಹ ಸುಡಲು ರಸೀದಿ ಪಡೆಯಲು ಮುಕ್ತಿಧಾಮದ ಕೌಂಟರ್ ನಲ್ಲಿ ಸರತಿ ಸಾಲಿನಲ್ಲಿ ಜನರು ನಿಲ್ಲುವಂತಾಗಿದೆ.