ವಿಶ್ವಕಪ್ ಹಾಲಿ ಚಾಂಪಿಯನ್ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡದ ವಿರುದ್ಧ ಸ್ನೇಹ ಪೂರ್ವಕ ಪಂದ್ಯವನ್ನಾಡುವ ಅವಕಾಶವನ್ನು ಭಾರತ ತಿರಸ್ಕರಿಸಿದೆ.
ಹೀಗಾಗಿ ಭಾರತದಲ್ಲಿರುವ ಲಕ್ಷಾಂತರ ಲಿಯೊನೆಲ್ ಮೆಸ್ಸಿ ಅಭಿಮಾನಿಗಳಿಗೆ ನಿರಾಸೆಯಾದಂತಾಗಿದೆ. ಅರ್ಜೆಂಟಿನಾ ಫುಟ್ಬಾಲ್ ಆಡಳಿತ ಮಂಡಳಿ ಭಾರತದ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್(AIFF) ಮುಂದೆ ಈ ಬೇಡಿಕೆಯನ್ನು ಇಟ್ಟಿತ್ತು. ಆದರೆ, ಇದನ್ನು AIFF ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಕತಾರ್ನಲ್ಲಿ ನಡೆದ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಚಾಂಪಿಯನ್ ಆಗುವ ಮೂಲಕ ಹಲವು ವರ್ಷಗಳಿಂದ ವಿಶ್ವಕಪ್ ಗಾಗಿ ಕನಸು ಕಾಣುತ್ತಿದ್ದ ಅರ್ಜೆಂಟೀನಾ ಜನರ ಕನಸನ್ನು ಈಡೇರಿಸಿತ್ತು. ಫುಟ್ಬಾಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆಯನ್ನು ಕೂಡ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಮಾಡಿತ್ತು.
ಈ ಟೂರ್ನಿಯಲ್ಲಿ ಅರ್ಜೆಂಟಿನಾ ತಂಡಕ್ಕೆ ಏಷ್ಯಾದಿಂದ ಭಾರೀ ಬೆಂಬಲ ಸಿಕ್ಕಿತ್ತು. ಭಾರತೀಯ ಅಭಿಮಾನಿಗಳು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದರು. ಇದೇ ಹಿನ್ನೆಲೆಯಲ್ಲಿ ಅರ್ಜಂಟಿನಾ ತಂಡ ಭಾರತದ ನೆಲದಲ್ಲಿ ಸ್ನೇಹಪೂರ್ವಕ ಪಂದ್ಯವನ್ನು ಆಡುವ ನಿರ್ಧಾರ ಮಾಡಿತ್ತು. ಜೂನ್ 12 ಹಾಗೂ 20ರಂದು ಎರಡು ಪಂದ್ಯಗಳನ್ನು ಸ್ನೇಹ ಪೂರ್ವಕವಾಗಿ ಆಡಲು ಅರ್ಜೆಂಟಿನಾ ಬಯಸಿತ್ತು ಎಂದು ವರದಿಯಾಗಿದೆ.
ಆದರೆ, ಪಂದ್ಯಗಳ ಆಯೋಜನೆಗೆ ಭಾರೀ ದೊಡ್ಡ ಮೊತ್ತದ ಬಜೆಟ್ ನ ಅಗತ್ಯವಿದ್ದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ತಿರಸ್ಕರಿಸಿದೆ. ವರದಿಯೊಂದರ ಪ್ರಕಾರ, ಈ ಪಂದ್ಯ ಆಡಲು ಅರ್ಜೆಂಟೀನಾ ತಂಡವು 4-5 ಮಿಲಿಯನ್ ಡಾಲರ್(ಸುಮಾರು 32-40 ಕೋಟಿ ರೂಪಾಯಿ) ಮೊತ್ತದ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಹೀಗಾಗಿ ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತದ ನಿಧಿ ಸಂಗ್ರಹಿಸುವುದು ಅಸಾಧ್ಯ ಎಂಬ ಕಾರಣಕ್ಕೆ ಈ ಮನವಿಯನ್ನು ತಿಸ್ಕರಿಸಿದೆ ಎನ್ನಲಾಗಿದೆ.