ಹಾಸನ: ಇತ್ತೀಚೆಗೆ ಎಲ್ಲ ವಿಷಯದಲ್ಲಿಯೂ ಬಾಜಿ ಕಟ್ಟುವ ಕಾರ್ಯ ನಡೆಯುತ್ತಿದೆ. ವ್ಯಕ್ತಿಯೊಬ್ಬ ಕುಡಿತದ ವಿಷಯದಲ್ಲಿ ಬಾಜಿ ಕಟ್ಟಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಹಾಸನ (Hassan)ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜ್ ಮತ್ತು ತಿಮ್ಮೇಗೌಡ ಸೇರಿಕೊಂಡು ಕುಡಿತದ ವಿಷಯದಲ್ಲಿ ಬಾಜಿ ಕಟ್ಟಿದ್ದರು.
ಅರ್ಧ ಗಂಟೆಯಲ್ಲಿ 90 ಎಂಎಲ್ ನ 10 ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದರು. ಚಾಲೆಂಜ್‌ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ತಿಮ್ಮೇಗೌಡ(60) ಸಾವನ್ನಪ್ಪಿದ್ದಾರೆ. ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದ ಇಬ್ಬರಿಗೂ ಕೃಷ್ಣೇಗೌಡ ಎಂಬಾತ ಮದ್ಯದ ಪ್ಯಾಕೆಟ್‌ಗಳನ್ನು ವಿತರಿಸಿದ್ದ. ಹೆಚ್ಚು ಮದ್ಯ ಕುಡಿದ ತಿಮ್ಮೇಗೌಡ ಬಸ್ ನಿಲ್ದಾಣದಲ್ಲಿಯೇ ರಕ್ತ ವಾಂತಿ ಮಾಡಿಕೊಂಡು ಕುಸಿದು ಬಿದ್ದಿದ್ದಾನೆ. ಆಗ ಸ್ಥಳದಿಂದ ದೇವರಾಜು ಹಾಗೂ ಕೃಷ್ಣೇಗೌಡ ಪರಾರಿಯಾಗಿದ್ದರು. ತಿಮ್ಮೇಗೌಡನ ಮಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.