ಇತ್ತೀಚೆಗೆ ಪ್ರತಿಯೊಬ್ಬರು ಮನುಷ್ಯರಿಗಿಂತಲೂ ತಂತ್ರಜ್ಞಾನವನ್ನೇ ಹೆಚ್ಚಾಗಿ ನಂಬುತ್ತಿದ್ದಾರೆ. ಎಲ್ಲಿಗೆ ಹೋಗಬೇಕಾದರೂ ಸರಿ ರಸ್ತೆ ಗೊತ್ತಿಲ್ಲವೆಂದರೆ ಸಾಕು, ಗೂಗಲ್ ಮ್ಯಾಪ್ ಹಾಕಿಕೊಂಡು ಆರಾಮಾಗಿ ಹೋಗುತ್ತೇವೆ ಎನ್ನುತ್ತಾರೆ. ಆದರೆ, ಗೂಗಲ್ ಮ್ಯಾಪ್ ನಂಬಿಕೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಉತ್ತರ ಕೆರೊಲಿನಾದಲ್ಲಿ ವ್ಯಕ್ತಿಯೊಬ್ಬ ಗೂಗಲ್ ಮ್ಯಾಪ್ ಸಹಕಾರದೊಂದಿಗೆ ತೆರಳಿ ಸಾವನ್ನಪ್ಪಿದ್ದಾನೆ. ಹೀಗಾಗಿ ಆ ಕುಟುಂಬಸ್ಥರು ಗೂಗಲ್ ಮ್ಯಾಪ್ ಮೇಲೆ ದೂರು ದಾಖಲಿಸಿದ್ದಾರೆ. ಈ ಆಪ್ ಕುಸಿದ ಸೇತುವೆ ಮೇಲೆ ಸಂಚಾರ ಮಾಡಲು ನಿರ್ದೇಶಿಸಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ವೈದ್ಯಕೀಯ ಡಿವೈಸ್ ಗಳ ಮಾರಾಟಗಾರ ಮತ್ತು ಯುಎಸ್ ನೌಕಾಪಡೆಯ ಅನುಭವಿ ಫಿಲಿಪ್ ಪ್ಯಾಕ್ಸನ್ ಸಾವನ್ನಪ್ಪಿದ ವ್ಯಕ್ತಿ. ಮಳೆ ಬರುತ್ತಿದ್ದ ಸಮಯದಲ್ಲಿ ರಾತ್ರಿ ತನ್ನ ಮಗಳ ಒಂಬತ್ತನೇ ಹುಟ್ಟುಹಬ್ಬದ ಪಾರ್ಟಿಯಿಂದ ಮನೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಎರಡು ಮಕ್ಕಳ ತಂದೆಯಾಗಿರುವ ಫಿಲಿಪ್ ಪ್ಯಾಕ್ಸನ್ ತನ್ನ ಮಗಳ ವಿಶೇಷ ದಿನವನ್ನು ಸ್ನೇಹಿತರ ಮನೆಯಲ್ಲಿ ಆಚರಿಸಿದ್ದರು. ಈ ಸಮಾರಂಭದ ನಂತರ ಫಿಲಿಪ್ ಎಲ್ಲರನ್ನೂ ಮನೆಗೆ ಕಳುಹಿಸಿ, ಪಾರ್ಟಿಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ವಸ್ತುಗಳನ್ನು ಜೋಡಿಸುವ ಹಾಗೂ ಸ್ಥಳವನ್ನು ಸ್ವಚ್ಛ ಮಾಡುವ ಕೆಲಸ ಮಾಡಲು ಉಳಿದುಕೊಂಡಿದ್ದರು. ಈ ಕೆಲಸ ಆದ ಮೇಲೆ ಮರಳಿ ಮನೆಗೆ ತೆರಳಲು ಫಿಲಿಪ್ ಪ್ಯಾಕ್ಸನ್ ಮುಂದಾಗಿದ್ದರು. ಆಗ ಅವರ ಗೂಗಲ್ ಮ್ಯಾಪ್ ಬಳಕೆ ಮಾಡಿದ್ದರು. ಈ ಗೂಗಲ್ ಮ್ಯಾಪ್ ತೋರಿದ ಮಾರ್ಗ ಅವರ ಪ್ರಾಣವನ್ನೇ ಬಲಿ ಪಡೆದುಕೊಂಡಿದೆ.